ವಿಜಯಪುರ, ಸೆಪ್ಟೆಂಬರ್ 3: ಚಿತ್ರದುರ್ಗದ ಮುರಘಾ ಮಠದ ಸ್ವಾಮೀಜಿ ಮೇಲೆ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿರುವ ಮೇಲೆ ಶಿವಮೂರ್ತಿ ಮುರುಘಾ ಶರಣರು ಮತ್ತೆ ಮಠದ ಪೀಠಾಧಿಪತಿಯಾಗಬಾರದು ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರಕರಣದ ಬಗ್ಗೆ ನಗರದಲ್ಲಿ ಮಾತನಾಡಿದ ಯತ್ನಾಳ್, “ದೇಶ ಹಾಳಾಗುವುದಕ್ಕೆ ಪ್ರಗತಿಪರರೇ ಕಾರಣ, ಇಂದು ಸ್ವಾಮೀಜಿಯ ಪರಿಸ್ಥಿತಿಗೂ ಅವರೇ ಕಾರಣ, ಮುರುಘಾ ಶರಣರು ಟಿಪ್ಪು ಸುಲ್ತಾನ ಫೋಟೋ ತೆಗೆದುಕೊಂಡು ಹೋಗಿ ಮಠದಲ್ಲಿಟ್ಟರು. ಟಿಪ್ಪುವನ್ನು ವರ್ಣನೆ ಮಾಡಿದಕ್ಕೆ ಸ್ವಾಮೀಜಿಗೆ ಈ ಗತಿ ಬಂದಿದೆ. ಮಠ ಮಾನ್ಯಗಳು ಇರುವುದೇ ಧರ್ಮದ ರಕ್ಷಣಗಾಗಿ, ಆದರೆ ಮುರುಘಾ ಶರಣರೂ ಇಸ್ಲಾಮ್ ಧರ್ಮದ ವರ್ಣನೆ ಮಾಡಿದರು,” ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಧರ್ಮವನ್ನು ರಕ್ಷಣೆ ಮಾಡಬೇಕಿದ್ದ ಸ್ವಾಮೀಜಿ ಪ್ರಗತಿಪರರ ಜೊತೆಗೂಡಿ ಕೆಲವು ಹೇಳಿಕೆ ನೀಡಿದ್ದಾರೆ. ಹಿಂದೂ ಧರ್ಮವನ್ನು ಬೆಳಸಬೇಕಿತ್ತು, ಆದರೆ ವಿಭೂತಿ ಹಚ್ಚಿಕೊಂಡು, ಕುಂಕುಮ ಹಚ್ಚಿಕೊಂಡು ಟಿಪ್ಪು ಸುಲ್ತಾನ್ ಪ್ರಶಂಸೆ ಮಾಡಿದರು. ಆದರೆ ಟಿಪ್ಪು ವರ್ಣನೆ ಮಾಡಿದವರೂ ಯಾರು ಉದ್ದಾರ ಆಗಲ್ಲ, ಟಿಪ್ಪು ಖಡ್ಗ ತಂದ ವಿಜಯ ಮಲ್ಯ ಹಾಳಾದ, ಟಿಪ್ಪು ಸಿನಿಮಾ ಮಾಡಿ ಪ್ರೊಡ್ಯೂಸರ್ ಹಾಳಾದ, ಟಿಪ್ಪು ಜಯಂತಿ ಮಾಡಿದ ಸಿದ್ದರಾಮಯ್ಯ 30 ಸಾವಿರ ಮತಗಳ ಅಂತರದಿಂದ ಸೋತರು. ಇದೀಗ ಸ್ವಾಮೀಜಿಗಳ ಸರದಿ ಎಂದು ವ್ಯಂಗ್ಯವಾಡಿದರು.