ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧ ಆಂತರಿಕ ಭದ್ರತಾ ವಿಭಾಗ(ಐಎಸ್‌ಡಿ) ಖ್ಯಾತ ನಟ ಲೂಸ್ ಮಾದ ಯೋಗಿ ಮತ್ತು ಕ್ರಿಕೆಟರ್ ಅಯ್ಯಪ್ಪ ಅವರನ್ನು ವಿಚಾರಣೆಗ ಒಳಪಡಿಸಿದೆ.
ಎರಡು ದಿನಗಳ ಹಿಂದೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರ ಕಚೇರಿಯಲ್ಲಿ ಐಎಸ್‌ಡಿ ಎಡಿಜಿಪಿ ಭಾಸ್ಕರ್ ರಾವ್ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.
ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ರಾಗಿಣಿ ಮತ್ತು ಲೂಸ್ ಮಾದ ಯೋಗಿ ಉತ್ತಮ ಸ್ನೇಹಿತರಾಗಿದ್ದಾರೆ. ರಾಗಿಣಿ ಮತ್ತು ಲೂಸ್ ಮಾದ ಯೋಗಿ ಬಂಗಾರಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರ 2013ರಲ್ಲಿ ಬಿಡುಗಡೆಯಾಗಿತ್ತು.
ಸೋಮವಾರ, ಮಂಗಳವಾರ ನಾನು ಸ್ಯಾಂಡಲ್‌ವುಡ್ ಡ್ರಗ್ಸ್ ಜಾಲದ ಜೊತೆ ಸಂಬಂಧ ಹೊಂದಿರುವ ನಟ, ನಟಿಯರ ಹೆಸರನ್ನು ಬಹಿರಂಗ ಪಡಿಸುವುದಾಗಿ ಉದ್ಯಮಿ, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಹೇಳಿದ್ದರು. ಈ ಮಾತಿಗೆ ಬದ್ಧ ಎಂಬಂತೆ ಇಂದು ಸಂಜೆ ಲೂಸ್ ಮಾದ ಯೋಗಿ ಅವರ ಹೆಸರನ್ನು ಫೇಸ್‌ಬುಕ್/ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಸಿಬಿ ಮತ್ತು ಎನ್‌ಸಿಬಿ ತನಿಖೆ ನಡೆಸುತ್ತಿದೆ.