ನಿಮ್ಮ ಗಾಡಿಯಲ್ಲಿ ಗಾಂಜಾ ಸಾಗಿಸುತ್ತಿದ್ದಿರಿ ಎಂದು ಪೊಲೀಸರ ಸೋಗಿನಲ್ಲಿ ತಪಾಸಣೆ ಮಾಡಿದ ಖದೀಮರು ಗಾಡಿಯಲ್ಲಿದ್ದ 4,79,250 ರೂಪಾಯಿ ನಗದು ದೋಚಿಕೊಂಡು ಪರಾರಿಯಾಗಿದ್ದರು. ಸಧ್ಯ ಈ ಆರೋಪಿಗಳನ್ನು ಬಂಧಿಸುವಲ್ಲಿ ಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿಯ ರಾಮತೀರ್ಥನಗರದ ನಿವಾಸಿ ಅತಾವುಲ್ಲಾ ಮಹಮ್ಮದ್‍ಹಯಾತ್ ಹೊನಗೇಕರ್ ಹಣ ಕಳೆದುಕೊಂಡ ವ್ಯಕ್ತಿ. ಬಳಿಕ ಇವರು ಈ ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದ ಕಿತ್ತೂರು ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತರಿಂದ 70 ಸಾವಿರ ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ 1 ಇಂಡಿಕಾ ಕಾರು ಹಾಗೂ 2 ಬೈಕ್‍ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಅಲ್ಲದೇ ಕೃತ್ಯಕ್ಕೆ ಪತ್ರಕರ್ತರ ನಕಲಿ ಗುರುತಿನ ಚೀಟಿಯನ್ನು ಇವರು ಬಳಕೆ ಮಾಡಿಕೊಂಡಿದ್ದು ಬಹಿರಂಗೊಂಡಿದೆ. ಆ ನಕಲಿ ಗುರುತಿನ ಚೀಟಿಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಡಿಎಸ್‍ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ಕಿತ್ತೂರು ಸಿಪಿಐ ಮಹಾಂತೇಶ ಹೊಸಪೇಟಿ, ಪಿಎಸ್‍ಐಗಳಾದ ಹಣಮಂತ ಧರ್ಮಟ್ಟಿ, ಕೆ.ಎಂ.ಕಲ್ಲೂರ, ಪ್ರವೀಣ ಕೋಶಿ ನೇತೃತ್ವದ ತಂಡವು ಈ ಆರೋಪಿಗಳನ್ನು ಬಂಧಿಸಿದೆ.