ಬೆಳಗಾವಿ: ಹತ್ತು ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿವೆ ಎಂದು ಭಾರತೀಯ ರಿಜರ್ವ್ ಬ್ಯಾಂಕು ಈಗಾಗಲೇ ಸ್ಪಷ್ಟಪಡಿಸಿರುವುದರಿಂದ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಮುಕ್ತವಾಗಿ ಇವುಗಳನ್ನು ಚಲಾವಣೆ ಮಾಡಬಹುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಕೆಲವೆಡೆ ಹತ್ತು ರೂಪಾಯಿ ನಾಣ್ಯವನ್ನು ಸ್ವೀಕರಿಸಲು ಕೆಲವು ವರ್ತಕರು-ವ್ಯಾಪಾರಸ್ಥರು ನಿರಾಕರಿಸುತ್ತಿದ್ದಾರೆ ಎಂಬ ದೂರುಗಳಿವೆ. ಆದರೆ ಈ ನಾಣ್ಯಗಳು ಚಲಾವಣೆಯಲ್ಲಿರುತ್ತವೆ ಎಂದು ನವೆಂಬರ್ 20, 2016 ರಂದು ಭಾರತೀಯ ರಿಜರ್ವ್ ಬ್ಯಾಂಕು ಸ್ಪಷ್ಟಪಡಿಸಿದ್ದು, ಈ ಕುರಿತು ಪ್ರಕಟಣೆಯನ್ನು ಕೂಡ ನೀಡಿರುತ್ತದೆ.
ಹತ್ತು ರೂಪಾಯಿ ಚಲಾವಣೆಯಲ್ಲಿದ್ದಾಗ್ಯೂ ಕೆಲವು ಕಡೆಗಳಲ್ಲಿ ಇವುಗಳನ್ನು ಸ್ವೀಕರಿಸಲು ವ್ಯಾಪಾರಸ್ಥರು ಹಿಂದೇಟು ಹಾಕುತ್ತಿರುವುದರಿಂದ ದೈನಂದಿನ ವಹಿವಾಟುಗಳನ್ನು ನಡೆಸಲು ಅನಾನುಕೂಲವಾಗುತ್ತಿದೆ ಎಂದು ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಮತ್ತು ಕೈಗಾರಿಕೆಗಳ ಸಂಘವು ನೀಡಿರುವ ಮನವಿಪತ್ರದಲ್ಲಿ ತಿಳಿಸಿದೆ.
ನಾಣ್ಯಗಳನ್ನು ವಿತರಿಸಲು ಬ್ಯಾಂಕುಗಳು ಸಿದ್ಧವಾಗಿರುವುದರಿಂದ ಹತ್ತು ನಾಣ್ಯಗಳ ಚಲಾವಣೆಗೆ ಆದ್ಯತೆ ನೀಡಬೇಕು ಎಂದು ಸಂಘ ತಿಳಿಸಿದೆ.
Laxmi News 24×7