ಶಿವಮೊಗ: ಸರ್ಕಾರ ಕೊಟ್ಟ ಮಾತಿನಂತೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಘೋಷಿಸದಿದ್ದರೆ ಆ.
23ರ ಬೆಳಿಗ್ಗೆ 10ಕ್ಕೆ ಶಿಗ್ಗಾವಿಯ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಿ ಬಳಿಕ ಮುಖ್ಯಮಂತ್ರಿ ಮನೆ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
‘ಲಿಂಗಾಯತ ಪಂಚಮಸಾಲಿ, ಮಲೆಗೌಡ ಲಿಂಗಾಯತ ಸಮಾಜವನ್ನು ಪ್ರವರ್ಗ ‘2ಎ’ ಮೀಸಲಾತಿಗೆ ಸೇರಿಸಲು ರಾಜ್ಯ ಸರ್ಕಾರಕ್ಕೆ ನೀಡಿದ್ದ ಗಡುವು ಸೋಮವಾರ ಮುಕ್ತಾಯ ವಾಗಲಿದೆ. ಮೀಸಲಾತಿ ಘೋಷಿಸಿದರೆ ಮುಖ್ಯಮಂತ್ರಿ ಬೊಮ್ಮಯಿ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಅಭಿನಂದಿಸ ಲಾಗುವುದು. ಘೋಷಿಸದಿದ್ದಲ್ಲಿ ಸತ್ಯಾಗ್ರಹ ನಡೆಸಲಾಗುವುದು’ ಎಂದು ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಎಚ್ಚರಿಸಿದರು.
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ 2021ರ
ಸೆ. 21ಕ್ಕೆ ಮೀಸಲಾತಿ ನೀಡುವ ಭರವಸೆ ನೀಡಿದ್ದರು. ಅವರು ಅಧಿಕಾರ ತ್ಯಾಗ ಮಾಡಿದ ಮೇಲೆ ಬಸವರಾಜ ಬೊಮ್ಮಾಯಿ ಸರ್ಕಾರ ಕೂಡ ಮೂರು ಬಾರಿ ಭರವಸೆ ನೀಡಿ ವಿಫಲವಾಗಿದೆ. ಕೊನೆಗೆ ಅನಿವಾರ್ಯವಾಗಿ ಮುಖ್ಯಮಂತ್ರಿ ಮನೆ ಮುಂಭಾಗ ಧರಣಿ ಕೂರುವ ತೀರ್ಮಾನ ಮಾಡಿದಾಗ ಸಂಧಾನ ಸಭೆ ನಡೆಸಿ ಎರಡು ತಿಂಗಳ ಕಾಲಾವಕಾಶ ಕೇಳಿದ್ದಲ್ಲದೇ, ಆಯೋಗ ರಚಿಸಿ ಸಮೀಕ್ಷೆಗೆ ತೀರ್ಮಾನ ಮಾಡಲಾಗಿತ್ತು. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಯುತ್ತಿದೆ ಎಂದರು.
‘ನಮ್ಮ ಸಮಾಜ ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದಿದೆ. ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲೂ ಅತ್ಯಂತ ಕೆಳಮಟ್ಟದಲ್ಲಿದ್ದು, ಎಲ್ಲ ವಿಚಾರಗಳ ಮಾಹಿತಿಯೂ ಸರ್ಕಾರಕ್ಕಿದೆ. ಎಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರ ಗಮನಕ್ಕೂ ತರಲಾಗಿದ್ದು, ಅವರು ಕೂಡ ಹೋರಾಟ ನಡೆಯುವ ಸ್ಥಳಕ್ಕೆ ಬಂದು ಬೆಂಬಲ ಸೂಚಿಸಿದ್ದರು. ಕೇಂದ್ರ ಸಚಿವ ಪ್ರಲ್ಹಾದ ಜೋಷಿಯವರು
ಕೂಡ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ’ ಎಂದು ಅಭಿಯಾನದ ಪ್ರಮುಖರಾದ ಮಲ್ಲಿಕಾರ್ಜುನ ಹಕ್ರೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ಪ್ರೊ.ವಿಜಯ ಕುಮಾರ್, ರುದ್ರೇಗೌಡ ಕಡೆಮನೆ, ಎಂ.ಎಸ್.ಕುಮಾರ್, ಎಂ.ಪಿ.ವಿಜಯ್ ಕುಮಾರ್, ನವೀನ್ ಉಪಸ್ಥಿತರಿದ್ದರು.