ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮನೆ ಮೇಲೆ ಸಿಬಿಐ ಶುಕ್ರವಾರ (ಆಗಸ್ಟ್ 19) ಬೆಳಗ್ಗೆ ದಾಳಿ ನಡೆಸಿದೆ.
ತಮ್ಮ ನಿವಾಸದ ಮೇಲೆ ಸಿಬಿಐ ದಾಳಿ ನಡೆದಿರುವುದಾಗಿ ಟ್ವೀಟ್ ಮಾಡಿರುವ ಡಿಸಿಎಂ ಸಿಸೋಡಿಯಾ, ತನಿಖೆಗೆ ಎಲ್ಲಾ ರೀತಿಯಿಂದಲೂ ಸಹಕಾರ ನೀಡುವ ಮೂಲಕ ಶೀಘ್ರವೇ ಸತ್ಯ ಹೊರಬರಲಿದೆ ಎಂದು ತಿಳಿಸಿದ್ದಾರೆ.
“ನಾವು ಸಿಬಿಐ ಅನ್ನು ಸ್ವಾಗತಿಸುತ್ತೇವೆ. ಶೀಘ್ರವಾಗಿ ಸತ್ಯ ಹೊರಬರಲು ನಾವು ಎಲ್ಲಾ ರೀತಿಯಿಂದಲೂ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಇದುವರೆಗೆ ನನ್ನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದರೂ ಕೂಡಾ, ಯಾವುದೂ ಸಾಬೀತಾಗಿಲ್ಲ. ದೇಶದ ಉತ್ತಮ ಶಿಕ್ಷಣಕ್ಕಾಗಿ ನಾನು ಮಾಡುತ್ತಿರುವ ಕೆಲಸವನ್ನು ತಡೆಯಲು ಸಾಧ್ಯವಿಲ್ಲ ಎಂದು ಸಿಸೋಡಿಯಾ ಹೇಳಿದ್ದಾರೆ.
2021-22ರ ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇಂದು ಬೆಳಗ್ಗೆ ದೆಹಲಿ ಉಪ ಮುಖ್ಯಮಂತ್ರಿ ಸಿಸೋಡಿಯಾ ನಿವಾಸ ಸೇರಿದಂತೆ ಹತ್ತಕ್ಕೂ ಅಧಿಕ ಸ್ಥಳಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.