ಬೆಂಗಳೂರು : ಬಹುಕೋಟಿ ಬ್ಯಾಂಕ್ ಸಾಲಕ್ಕೆ ಸಂಬಂಧಿಸಿದ ವ್ಯಾಜ್ಯವೊಂದರಲ್ಲಿ ಹೈಕೋರ್ಟ್ ಆದೇಶದ ಅನುಸಾರ ಸಾಲದ ಮೊತ್ತದಲ್ಲಿನ ಭಾಗಶಃ ಮೊತ್ತ ₹ 25 ಕೋಟಿ ಭರ್ತಿ ಮಾಡದೆ ಕೋರ್ಟ್ ಆದೇಶ ಉಲ್ಲಂಘಿಸಿದ ಆರೋಪದಡಿ ಬಾಗಲಕೋಟೆ ಜಿಲ್ಲೆ ತೇರದಾಳದ ಸಾವರಿನ್ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ನಾಲ್ವರು ನಿರ್ದೇಶಕರನ್ನು ಹೈಕೋರ್ಟ್ ಜೈಲಿಗಟ್ಟಿದೆ.
ಕರ್ನಾಟಕ ರಾಜ್ಯ ಕೋ ಆಪರೇಟಿವ್ ಅಪೆಕ್ಸ್ ಬ್ಯಾಂಕ್ ದಾಖಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಆರೋಪಿಗಳಾದ ಮೆಸರ್ಸ್ ಸಾವರಿನ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರೂ ಆದ ಶಿವಕುಮಾರ್ ಸಂಗಪ್ಪ ಮಲಘಾಣ, ನಿರ್ದೇಶಕರಾದ ಮಲ್ಲನಗೌಡ ಮಾಲಕಿ, ಬಿ.ಎನ್.ಅರಕೇರಿ, ಗುರಪ್ಪ ರೆಡ್ಡಿ ಮತ್ತು ನಿಂಗಪ್ಪ ತಿಮ್ಮಪ್ಪ ಹುಗ್ಗಿ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರು ಅವರಿದ್ದ ಧಾರವಾಡ ವಿಭಾಗೀಯ ನ್ಯಾಯಪೀಠ ಆದೇಶಿಸಿದೆ.
ಬಂಧಿತರನ್ನು ಇದೇ 12ರ ಸಂಜೆ ಧಾರವಾಡ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದ್ದು, ಇವರಲ್ಲಿ ಇಬ್ಬರು ಹಿರಿಯ ರಾಜಕೀಯ ನಾಯಕರ ನಿಕಟವರ್ತಿಗಳು ಎಂದು ತಿಳಿದು ಬಂದಿದೆ.
ಕಾರ್ಖಾನೆ ಪಡೆದಿದ್ದ ಸಾಲದ ಮೊತ್ತ 2019ರಲ್ಲಿ ₹ 316.46 ಕೋಟಿಗೆ ತಲುಪಿತ್ತು. ಮರುಪಾವತಿ ವಿಳಂಬವಾದ ಕಾರಣ ವಿವಿಧ ಹಂತಗಳಲ್ಲಿ ಕಾನೂನು ಹೋರಾಟ ಎದುರಿಸುತ್ತಿತ್ತು. ಮೇಲ್ಮನವಿ ವಿಚಾರಣೆ ವೇಳೆ ₹ 25 ಕೋಟಿಯನ್ನು ಪಾವತಿಸುವುದಾಗಿ ಪ್ರತಿವಾದಿಗಳು ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದರು.
Laxmi News 24×7