ಬೆಂಗಳೂರು: ಇದು ಲಂಚ – ಮಂಚದ ಸರಕಾರ ಎಂದು ಆರೋಪಿಸಿದ್ದ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಬಿಜೆಪಿ ತಿರುಗೇಟು ನೀಡಿದ್ದು, ಕಾಂಗ್ರೆಸ್ ನಾಯಕರ ರಂಗಬಿರಂಗಿ ಬಗ್ಗೆ ಸಾಕಷ್ಟು ದಂತಕತೆ ಮಾತ್ರವಲ್ಲ, ಸಿಡಿಗಳೂ ಇವೆ ಎಂದು ಎಚ್ಚರಿಸಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಪ್ರಿಯಾಂಕ್ ಖರ್ಗೆ ಅವರೇ, ಸಹಾಯ ಮಾಡುವುದಾಗಿ ನಂಬಿಸಿ ಅಸಹಾಯಕ ಹೆಣ್ಣೊಬ್ಬಳ ಮೇಲೆ ಮೇಟಿ ಲೈಂಗಿಕ ದೌರ್ಜನ್ಯ ಎಸಗಿದ್ದು ನಿಮ್ಮ ಕಾಲದಲ್ಲೇ ಅಲ್ಲವೇ? ಎಂದು ಪ್ರಶ್ನಿಸಿದೆ.
ಯುಪಿಎ ಸರ್ಕಾರದಲ್ಲಿ ಪ್ರಭಾವಿಗಳಾಗಿದ್ದ ಕಾಂಗ್ರೆಸ್ ನಾಯಕರುಗಳು ಮಹಿಳೆಯರ ಮೇಲೆ ನಡೆಸಿದ ” ದಿಗ್ವಿಜಯ” ” ಅಭಿಷೇಕ” ಗಳ ಸಿಡಿ ನಿಮ್ಮ ಮಂಚದ ಸರ್ಕಾರದ ಫಲವಲ್ಲವೇ? ಲಂಚ- ಮಂಚದ ಸರ್ಕಾರ ಎಂದು ಆರೋಪ ಮಾಡಿದ್ದ ಮಾಜಿ ಸಚಿವ ಪ್ರಿಯಾಂಕ ಖರ್ಗೆಯವರಿಗೆ “ತಮ್ಮ ಮನೆಯ ಹೆಂಚು ತೂತು” ಎಂಬುದೇ ಗೊತ್ತಿಲ್ಲ. ಎಂದು ಟೀಕಿಸಿದೆ.
ಇವರು ಆರೋಪ ಮಾಡಿದ ಬೆನ್ನಲ್ಲೆ ಜಯಮಾಲಾ ಅವರ ಲಂಚದ ಹಗರಣ ಬಯಲಾಗಿದೆ. ಹಾಗಾದರೆ ಲಂಚದ ಸರ್ಕಾರ ಯಾರದ್ದು? ಕಾಂಗ್ರೆಸ್ ನಾಯಕರ ರಾತ್ರಿ ಬದುಕಿನ ರಂಗ-ಬಿರಂಗಿ ಬಗ್ಗೆ ಸಾಕಷ್ಟು ದಂತಕತೆಗಳು ಮಾತ್ರವಲ್ಲ, ಗುಪ್ತಸಿಡಿಗಳೂ ಇವೆ. ಜೂನಿಯರ್ ಖರ್ಗೆ ಅವರೇ, ಸಭ್ಯಸ್ಥರ ಮುಖವಾಡ ಹಾಕಿ ಸಮಾಜದ ಕಣ್ಣಿಗೆ ಗಣ್ಯರೆಂದು ಬಿಂಬಿಸಿಕೊಂಡ ಕಾಂಗ್ರೆಸ್ ಗೋಮುಖ ವ್ಯಾಘ್ರಗಳ ಪಟ್ಟಿ ನೀಡಿದರೆ ಸಮರ್ಥನೆ ಮಾಡಿಕೊಳ್ಳುವುದಕ್ಕೂ ನಿಮಗೆ ಕಷ್ಟವಾಗಬಹುದು ಎಂದು ಎಚ್ಚರಿಕೆ ನೀಡಿದೆ.
ಸಾವಿರಾರು ಮಹಿಳೆಯರು, ಪ್ರತಿಭಾವಂತರು, ವಿದ್ಯಾವಂತರು ಕಷ್ಟಪಟ್ಟು, ಅನೇಕ ಪರೀಕ್ಷೆಗಳನ್ನು ಉತ್ತೀರ್ಣರಾಗಿ, ಕೆಲಸ ಗಿಟ್ಟಿಸಿಕೊಳ್ಳುತ್ತಾರೆ.
ಪ್ರಿಯಾಂಕ ಖರ್ಗೆ ಅವರೇ ನಿಮ್ಮ ಈ ಮಾತುಗಳು, ಅಷ್ಟು ಜನ ಮಹಿಳೆಯರಿಗೆ ಅವಮಾನ ಮಾಡಿದಂತಲ್ಲವೇ? ಕೂಡಲೇ ಕ್ಷಮೆಯಾಚಿಸಿ ಎಂದು ಆಗ್ರಹಿಸಿದೆ
Laxmi News 24×7