ಬಳ್ಳಾರಿ: ಮಹಿಳೆಯರ ಬಗ್ಗೆ ಮಾತನಾಡುವಾಗ ಸಣ್ಣ ಖರ್ಗೆಯವರಿಗೆ ನಾಲಿಗೆ ಮೇಲೆ ಹಿಡಿತವಿರಲಿ ಎಂದು ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಎಚ್ಚರಿಸಿದರು.
ನಗರದ ಹೆಚ್.ಆರ್.ಗವಿಯಪ್ಪ ವೃತ್ತದಲ್ಲಿ ಹರ್ ಘರ್ ತ್ರಿವರ್ಣಾ ನಿಮಿತ್ತ 150 ಅಡಿ ಎತ್ತರದ ಧ್ವಜಸ್ತಂಭಕ್ಕೆ ಧ್ವಜಾರೋಹ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ತಂದೆ ಮಲ್ಲಿಕಾರ್ಜುನ ಖರ್ಗೆಯವರಂತೆ ಸಣ್ಣ ಖರ್ಗೆ ಪ್ರಿಯಾಂಕ್ ಖರ್ಗೆಯವರು ಸಹ ಸಂಸ್ಕಾರವಂತರು ಅಂದುಕೊಂಡು ಸದನದಲ್ಲಿ ಮಾತನಾಡುವಾಗ ಸಣ್ಣ ಖರ್ಗೆ ಎಂದು ಉಲ್ಲೇಖ ಮಾಡುತ್ತಿದ್ದೆ. ಎಲ್ಲರೂ ಪ್ರಿಯಾಂಕಾ, ಪ್ರಿಯಾ ಅಂತ ಹಂಗಿಸುತ್ತಿದ್ದರು. ಆದರೆ, ಒಬ್ಬ ಬುದ್ಧಿವಂತ ದಲಿತ, ಹಿಂದುಳಿದ ನಾಯಕನ ಮಗನಾಗಿ ಈ ರೀತಿ ಭಾವನೆ ಅವರಿಗೆ ಶೋಭೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲಂಚ, ಮಂಚ ಎನ್ನುವ ಹೇಳಿಕೆ ಕಾಂಗ್ರೆಸ್ ನ ಹಿನಾಯ ಸಂಸ್ಕ್ರತಿಯನ್ನು ತೋರಿಸುತ್ತದೆ. ಮಹಿಳೆಯರಿಗೆ ಅಗೌರವ ತೋರುವ ಈ ರೀತಿಯ ಮಾತುಗಳು ಯಾಕೆ ಬಳಕೆ ಮಾಡಬೇಕು? ಎಂದು ಪ್ರಶ್ನಿಸಿದ ಸಚಿವ ರಾಮುಲು, ನಿನಗೆ ಶಕ್ತಿ ಇದ್ದರೆ 2023 ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಪ್ರಯತ್ನ ಮಾಡು ಎಂದು ತಿಳಿಸಿದರು.
ನೀನು ಈಗಲೇ ದೊಡ್ಡ ಮನುಷ್ಯ ಆಗಿಲ್ಲ, ಇನ್ನೂ ಸಮಯಬೇಕಾಗತ್ತದೆ. ಈ ರೀತಿ ಲಂಚ ಮಂಚ ಎನ್ನುವ ಮಾತುಗಳ ಮೂಲಕ ಹೆಣ್ಣುಮಕ್ಕಳಿಗೆ ಅಗೌರವ ತೋರಿದಂತೆ ಸಣ್ಣ ಖರ್ಗೆ ಅವರೇ ಮಾತಾಡುವಾಗ ನಾಲಿಗೆಯನ್ನು ಹತೋಟಿಯಲ್ಲಿ ಇಟ್ಟುಕೊಂಡು ಮಾತನಾಡಿ ಎಂದು ವಾಗ್ದಾಳಿ ನಡೆಸಿದರು.
Laxmi News 24×7