ಬೆಳಗಾವಿ: ಭಾರತ ಚುನಾವಣಾ ಆಯೋಗದ ಸೂಚನೆಯಂತೆ 2023ರ ಮಾರ್ಚ್ ಅಂತ್ಯಕ್ಕೆ ಮತದಾರರ ಪಟ್ಟಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಕಾರ್ಯ ಪ್ರತಿಶತ 100 ರಷ್ಟು ಪೂರ್ಣಗೊಳಿಸಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ, ಭಾರತ ಚುನಾವಣಾ ಆಯೋಗ ಹಾಗೂ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಸಹಯೋಗದಲ್ಲಿ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಸೋಮವಾರ ನಡೆದ ಮತದಾರರ ಆಧಾರ ಸಂಖ್ಯೆಗಳನ್ನು ಮತದಾರರ ಪಟ್ಟಿಗೆ ಜೋಡಣೆ ಕಾರ್ಯ ಪ್ರಾರಂಭೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಬಿಎಲ್ ಒಗಳು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಫಾರ್ಮ್ 6,7 ಹಾಗೂ 8 ಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ನಂತರ ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಫಾರ್ಮ್ 6(ಬಿ) ಯಲ್ಲಿ ಮತದಾರರ ಆಧಾರ್ ಸಂಖ್ಯೆಯನ್ನು ಜೋಡಿಸುವ ಕಾರ್ಯಕ್ಕೆ ಸಿದ್ಧರಾಗಬೇಕು ಎಂದರು.
ಆಧಾರ ಸಂಖ್ಯೆಯನ್ನು ಜೋಡಿಸುವ ಕಾರ್ಯದಲ್ಲಿ ಯಾವುದೇ ರೀತಿಯ ಮಾಹಿತಿ, ದಾಖಲಾತಿ ಬಹಿರಂಗವಾದರೆ ಅಧಿಕಾರಿ, ಸಿಬ್ಬಂದಿಗಳು ಕಾನೂನು ರೀತಿಯಲ್ಲಿ ಶಿಕ್ಷೆಗೂ ಒಳಗಾಗಬೇಕಾಗುತ್ತದೆ. ಹೀಗಾಗಿ ನಿಗದಿತ ಅವಧಿಯಲ್ಲಿ ಮುತುವರ್ಜಿಯಿಂದ ಆಧಾರ್ ಸಂಖ್ಯೆಯನ್ನು ಜೋಡಿಸುವ ಕಾರ್ಯವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ಅವರು ಎಚ್ಚರಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾನೂನು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ ಅವರು, ಪಾರದರ್ಶಕ ಚುನಾವಣಾ ಪ್ರಕ್ರಿಯೆ ನಡೆಸಲು ಮತದಾರರ ಪಟ್ಟಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವುದು ಉತ್ತಮ ಕಾರ್ಯವಾಗಿದೆ. ಚುನಾವಣೆ ಸಮಯದಲ್ಲಿ ವೋಟರ್ ಐಡಿ ರದ್ದಾಗಿದೆ ಎಂದು ದೂರುವುದಕ್ಕಿಂತ ಚುನಾವಣಾ ಆಯೋಗದ ಸೂಚನೆಯಂತೆ ಸಾರ್ವಜನಿಕರು ನಿಯಮಾನುಸಾರ ಅಧಿಕೃತ ಮತಚೀಟಿ ಹೊಂದಬೇಕು ಎಂದು ಹೇಳಿದರು.