ಬೆಳಗಾವಿ: ಯುವಕನೋರ್ವ ಪ್ರೇಯಸಿಯ ಕೊಂದು ಬಳಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬಸವ ಕಾಲೋನಿಯಲ್ಲಿ ನಡೆದಿದೆ. ಜಿಲ್ಲೆಯ ಸವದತ್ತಿ ತಾಲೂಕಿನ ಮದ್ಲೂರು ಗ್ರಾಮದ ರೇಣುಕಾ ಎಂಬುವಳನ್ನು ಬೂದಿಗೊಪ್ಪ ಗ್ರಾಮದ ರಾಮಚಂದ್ರ ತೆಣಗಿ (29) ಎಂಬಾತ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ರೇಣುಕಾ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇತ್ತ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ರಾಮಚಂದ್ರ ತೆಣಗಿ ರಾಜ್ಯಶಾಸ್ತ್ರದಲ್ಲಿ ಉನ್ನತ ಪದವಿ ವ್ಯಾಸಂಗ ಮಾಡುತ್ತಿದ್ದ. ಕೊಲೆಯಾದ ರೇಣುಕಾ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಗುರುವಾರ ತಡರಾತ್ರಿ ಮನೆಗೆ ಬಂದಿದ್ದ ಪ್ರಿಯಕರ ರಾಮಚಂದ್ರ ರೇಣುಕಾರನ್ನು ಸ್ಕಿಪ್ಪಿಂಗ್ ವೈರ್‌ನಿಂದ ಕತ್ತು ಬಿಗಿದು ಕೊಲೆ ಮಾಡಿ, ಬಳಿಕ ಅದೇ ವೈರ್ ಅನ್ನು ಫ್ಯಾನ್‌ಗೆ ಕಟ್ಟಿಕೊಂಡು ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.