ಬೆಂಗಳೂರು: ರಾಜ್ಯದಲ್ಲಿ ಮರಾಠ ಸಮುದಾಯಕ್ಕೆ 2ಎ ಮೀಸಲಾತಿ ಕೊಡುವ ವಿಚಾರವಾಗಿ ಆಯೋಗದಿಂದ ವರದಿ ತರಿಸಿಕೊಂಡು ಸಂವಿಧಾನಾತ್ಮಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಅರಮನೆ ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಟೊಂಕ ಕಟ್ಟಿ ನಿಂತಿರುವ ಸಮುದಾಯಕ್ಕೆ ನ್ಯಾಯ ಒದಗಿಸುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ. ಮರಾಠ ಸಮುದಾಯಕ್ಕೆ ಹಿಂದುಳಿದ ವರ್ಗದ 3ಬಿ ಮೀಸಲಾತಿಯಿಂದ 2ಎ ಮೀಸಲಾತಿ ಕೊಡುವ ವಿಚಾರ ಹಲವು ವರ್ಷಗಳ ಬೇಡಿಕೆಯಾಗಿದೆ. ಈಗಾಗಲೆ 10ಕ್ಕೂ ಅಧಿಕ ಸಮುದಾಯಗಳು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದು, ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಯಾವ ದೇಶ ಅಥವಾ ಸಮುದಾಯಕ್ಕೆ ಉತ್ತಮ ಚರಿತ್ರೆ ಇರುತ್ತದೆಯೋ ಅಂತಹ ದೇಶ ಅಥವಾ ಸಮುದಾಯ ಉತ್ತಮ ಭವಿಷ್ಯ ಹೊಂದಿರುತ್ತದೆ ಎನ್ನುವುದಕ್ಕೆ ಮರಾಠ ಸಮುದಾಯ ತಾಜಾ ಉದಾಹರಣೆ. ಹಿಂದು ಸಾಮ್ರಾಜ್ಯದಲ್ಲಿ ಮಿನುಗುತಾರೆಯಾಗಿರುವ ಛತ್ರಪತಿ ಶಿವಾಜಿ ವಂಶಸ್ಥರಾದ ನೀವು ಪುಣ್ಯವಂತರು. ಮರಾಠ ಸಮುದಾಯ ರಾಜ್ಯದ ನಾಡು, ನುಡಿ, ಆಚಾರ, ವಿಚಾರ ಮತ್ತು ಸಂಪ್ರದಾಯಗಳಲ್ಲಿ ಬೆರೆತುಕೊಂಡಿದೆ. ಈಗ ಸಮುದಾಯದ ಅಭಿವೃದ್ಧಿ ಗಾಳಿ ಬೀಸಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದಂತೆ ಮರಾಠ ಅಭಿವೃದ್ಧಿ ನಿಗಮ ಆರಂಭಿಸಲಾಗಿದೆ. ಇತ್ತೀಚೆಗೆ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿದ್ದು, 100 ಕೋಟಿ ರೂ. ಅನುದಾನವನ್ನೂ ಕೊಡಲಾಗಿದೆ. ಈ ಅನುದಾನವನ್ನು ಯುವಕರು, ರೈತರು ಹಾಗೂ ಮಹಿಳೆಯರ ಕಲ್ಯಾಣಕ್ಕೆ ಸಮರ್ಪಕವಾಗಿ ಬಳಸಿದಲ್ಲಿ ಮತ್ತಷ್ಟು ಅನುದಾನ ನೀಡಲಾಗುತ್ತದೆ ಎಂದು ಸಿಎಂ ತಿಳಿಸಿದರು.
ಮರಾಠ ಗೋಸಾಯಿ ಮಠದ ಪೀಠಾಧ್ಯಕ್ಷ ಮಂಜುನಾಥ ಭಾರತೀ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಶಿವರಾಂ ಹೆಬ್ಬಾರ್, ಶಾಸಕರಾದ ಅನಿಲ ಬೆನಕೆ ಎಂ.ಪಿ.ರೇಣುಕಾಚಾರ್ಯ, ಅಭಯ್ ಪಾಟೀಲ್, ಶರಣು ಸಲಗಾರ, ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿರಾವ್ ಜಿ. ಮುಳೆ ಮತ್ತಿತರರು ಉಪಸ್ಥಿತರಿದ್ದರು.
ಡಿಪಿಆರ್ ತಯಾರಿಕೆಗೆ 10 ಕೋಟಿ ರೂ.: ರಾಜ್ಯದಲ್ಲಿ ಛತ್ರಪತಿ ಶಿವಾಜಿ ಅವರ ತಂದೆ ಶಹಾಜಿ ಭೋನ್ಸಲೆ ರಾಜ್ಯದೊಂದಿಗೆ ಹೆಚ್ಚು ಒಡನಾಟ ಹೊಂದಿದ್ದರು. ಜತೆಗೆ ಸಂಬಾಜಿ, ವೆಂಕೋಜಿ ಸೇರಿ ಹಲವು ನಾಯಕರು ಕೊಡುಗೆ ನೀಡಿದ್ದಾರೆ. ಹಿಂದು ಧರ್ಮ ಮತ್ತು ಸಂಸ್ಕೃತಿ ಉಳಿವಿಗಾಗಿ ನಾಡಿನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿ ಪ್ರಾಣ ತ್ಯಾಗ ಮಾಡಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಮರಾಠ ರಾಜರ ಕುರುಹುಗಳಿರುವ ಮತ್ತು ಸಮಾಧಿಗಳಿರುವ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ವಿಸõತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಕಾರ್ಯಕ್ಕಾಗಿ 10 ಕೋಟಿ ರೂ. ಅನುದಾನ ಕೊಡಲಾಗುವುದು. ರಾಜ್ಯದ ಎಲ್ಲ ಗಡಿ ಭಾಗದ ಗ್ರಾಮ ಪಂಚಾಯಿತಿಗಳ ಸಮಗ್ರ ಅಭಿವೃದ್ಧಿ ಹಾಗೂ ಸಂಪರ್ಕ ರಸ್ತೆ ಕಲ್ಪಿಸಲು ಅನುದಾನ ಕೊಡಲಾಗಿದೆ. ಜತೆಗೆ, ಗಡಿ ಪ್ರಾಧಿಕಾರಕ್ಕೆ ಶೀಘ್ರವಾಗಿ ಹೆಚ್ಚಿನ ಅನುದಾನ ನೀಡಿ ಬಲಪಡಿಸಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ನಮ್ಮ ದೇಶದ ಬಹುತೇಕ ರಾಜ್ಯಗಳು ವಿವಿಧ ಭಾಷೆ, ಜಾತಿ, ಸಮುದಾಯ, ಸಂಸ್ಕೃತಿಗಳನ್ನು ಹೊಂದಿವೆ. ಆದರೆ ಇಡೀ ದೇಶದಲ್ಲಿ ಒಂದು ಭಾಷಿಕರಿಗೆ (ಮರಾಠ) ಅಭಿವೃದ್ಧಿ ನಿಗಮ ಸ್ಥಾಪಿಸಿದ ನಮ್ಮ ರಾಜ್ಯ ಸಮಗ್ರ ಅಭಿವೃದ್ಧಿಗೆ ಮಾದರಿಯಾಗಿದೆ.
| ಡಾ.ಸಿ.ಎನ್.ಅಶ್ವತ್ಥನಾರಾಯಣ ಸಚಿವ
ರಾಜ್ಯದಲ್ಲಿ ಮರಾಠ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕು ಮಹಾರಾಜರ ಕುರುಹುಗಳಾದ ಗಜೇಂದ್ರಗಡ, ಚನ್ನಗಿರಿ, ಕನಕಗಿರಿ, ಕೊಪ್ಪಳ, ಬಸರೂರು, ಕಾಡು ಮಲ್ಲೇಶ್ವರ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ಶಿವಾಜಿ ಅಧ್ಯಯನ ಕೇಂದ್ರ ಆರಂಭಿಸಬೇಕು.
| ಮಾರುತಿರಾವ್ ಜಿ. ಮುಳೆ ರಾಜ್ಯ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ಅಧ್ಯಕ್ಷ
ಠೇವಣಿ ಸಿಗದ ಕಾಲದಲ್ಲಿ ಬೆಂಬಲ: ರಾಜ್ಯದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದವರಿಗೆ ಠೇವಣಿ ಪಡೆಯುವಷ್ಟು ಮತ ಗಳಿಸಲು ಸಾಧ್ಯವಾಗದ ಸಂದರ್ಭದಲ್ಲಿ ಬೆಂಬಲಕ್ಕೆ ನಿಂತವರು ಮರಾಠ ಸಮುದಾಯದವರಾಗಿದ್ದಾರೆ. ಈ ಹಿಂದೆ ನಾನು ಸಿಎಂ ಆಗಲು ಹಾಗೂ ಪ್ರಸ್ತುತ ಬೊಮ್ಮಾಯಿ ಸಿಎಂ ಆಗಲು ಮರಾಠ ಸಮುದಾಯದ ಕೊಡುಗೆ ಬಹುಮುಖ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಪ್ರಸ್ತುತ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದ್ದು, ಅವರ ಬಹುದಿನಗಳ ಬೇಡಿಕೆಯಾದ 2ಎ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಆಯೋಗದ ವರದಿ ತರಿಸಿಕೊಂಡು ಕ್ರಮವಹಿಸಬೇಕು ಎಂದು ತಿಳಿಸಿದರು.
ಮುಖ್ಯಮಂತ್ರಿಗೆ ಬೆಳ್ಳಿ ಖಡ್ಗ ಉಡುಗೊರೆ: ಶಾಸಕ ಅಭಯ ಪಾಟೀಲ್ ಅವರಿಂದ ಬಸವರಾಜ ಬೊಮ್ಮಾಯಿ ಅವರಿಗೆ ಸುಮಾರು 3 ಅಡಿ ಎತ್ತರದ ಸಿಂಹಾಸನಾರೂಢ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಕೃತಿಯನ್ನು ಕೊಡುಗೆಯಾಗಿ ನೀಡಿದರು. ಮತ್ತೊಂದೆಡೆ ಉದ್ಯಮಿ ವಿಜಯಕುಮಾರ ಭೋಸ್ಲೆ ಅವರು 2 ಕೆ.ಜಿ.ಗಿಂತ ಅಧಿಕ ತೂಕದ ಬೆಳ್ಳಿ ಖಡ್ಗ ನೀಡಿದರು.
15 ಸಾವಿರ ಜನರು ಭಾಗಿ: ಅರಮನೆ ಮೈದಾನದ ತ್ರಿಪುರ ವಾಸಿನಿ ಆವರಣದಲ್ಲಿ ನಡೆದ ಮರಾಠ ಅಭಿವೃದ್ಧಿ ನಿಗಮ ಉದ್ಘಾಟನೆ, ಲಾಂಛನ ಬಿಡಗಡೆ, ಆನ್ಲೈನ್ ಪೋರ್ಟಲ್ ಆರಂಭ ಮತ್ತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಒಟ್ಟು 15 ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದರು. ಬೆಳಗಾವಿ ಮತ್ತು ಹುಬ್ಬಳ್ಳಿ ಭಾಗದ ಜನರು ಹೆಚ್ಚಾಗಿದ್ದರು. ಕಾರು, ಬಸ್, ಮಿನಿ ಲಾರಿಗಳು ಹಾಗೂ ಟೆಂಪೋಗಳಲ್ಲಿ ಜನರು ಆಗಮಿಸಿದ್ದರು. ಹೀಗಾಗಿ, ಬೆಳಗ್ಗೆ ಮತ್ತು ಮಧ್ಯಾಹ್ನ 2 ಗಂಟೆ ನಂತರ ಮೇಖ್ರಿ ವೃತದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.