ನವದೆಹಲಿ: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ವಿರುದ್ಧ ಕೆಲವು ನಿರ್ದೇಶನಗಳನ್ನು ನೀಡಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಕ್ರಮಕ್ಕೆ ಭಾರಿ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಎಸಿಬಿ ವಿರುದ್ಧ ನೀಡಲಾಗಿರುವ ಎಲ್ಲಾ ನಿರ್ದೇಶನಗಳಿಗೂ ತಡೆ ನೀಡಿದೆ.
ಎಸಿಬಿಯಿಂದ ತನಿಖೆ ಮುಗಿದ ಪ್ರಕರಣಗಳ ಪಟ್ಟಿ ಹಾಗೂ ಅಧಿಕಾರಿಗಳ ಸೇವಾ ದಾಖಲೆಗಳನ್ನು ಸಲ್ಲಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶಗಳಿಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿ ಇವುಗಳಿಗೆ ತಡೆ ನೀಡಿರುವುದಾಗಿ ಹೇಳಿದೆ.
ಭ್ರಷ್ಟಾಚಾರ ನಿಗ್ರಹ ದಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ವಿರುದ್ಧ ತಾವು ಆದೇಶ ಹೊರಡಿಸಿರುವುದಕ್ಕೆ ತಮಗೆ ವರ್ಗಾವಣೆಯ ಬೆದರಿಕೆ ಬಂದಿರುವುದಾಗಿ ಹೇಳುವ ಮೂಲಕ ಇತ್ತೀಚೆಗೆ ಭಾರಿ ಸಂಚಲನ ಸೃಷ್ಟಿಸಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಭಾರಿ ಅಸಮಾಧಾನ ಹೊರಹಾಕಿದೆ.
ಸೀಮಂತ್ ಕುಮಾರ್ ಸಿಂಗ್ ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿ, ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತೀವ್ರ ಟೀಕಾ ಪ್ರಹಾರ ಎದುರಿಸಿದ್ದ ಐಎಎಸ್ ಆಧಿಕಾರಿ ಜೆ. ಮಂಜುನಾಥ್ ಅವರು ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸಿತು. ನ್ಯಾಯಮೂರ್ತಿ ಸಂದೇಶ್ ಅವರು ತಮ್ಮ ವಿರುದ್ಧ ವ್ಯಕ್ತಪಡಿಸಿರುವ ಕಟುವಾದ ಅಭಿಪ್ರಾಯಗಳ ಸಿಂಧುತ್ವವನ್ನು ಈ ಅಧಿಕಾರಿಗಳು ಪ್ರತ್ಯೇಕವಾದ ಅರ್ಜಿಯ ಮೂಲಕ ಪ್ರಶ್ನಿಸಿದ್ದರು. ಇಬ್ಬರ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸುವುದಾಗಿ ಹೇಳಿದ್ದ ಸುಪ್ರೀಂಕೋರ್ಟ್ ಈಗ ಅದಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಿದೆ.
ಅಧಿಕಾರಿಗಳು ಸಲ್ಲಿಸಿದ್ದ ವಿಶೇಷ ಮೇಲ್ಮವಿಯ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರ ಪೀಠ ನಡೆಸಿತು.
ಬಂಧಿತರಾಗಿರುವ ಮಂಜುನಾಥ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸುವುದನ್ನು ಬಿಟ್ಟು ಕರ್ನಾಟಕ ಹೈಕೋರ್ಟ್ ತನ್ನ ವ್ಯಾಪ್ತಿಯನ್ನು ಮೀರಿ ಆದೇಶ ಹೊರಡಿಸಿದೆ. ಎಸಿಬಿಯಿಂದ ತನಿಖೆ ಮುಗಿದ ಪ್ರಕರಣಗಳ ಪಟ್ಟಿ ಹಾಗೂ ಅಧಿಕಾರಿಗಳ ಸೇವಾ ದಾಖಲೆಗಳನ್ನು ಸಲ್ಲಿಸುವಂತೆ ಹೇಳಿರುವುದು ಸಮಂಜಸವಲ್ಲ. ಆರೋಪಿಯ ಜಾಮೀನು ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಅಪ್ರಸ್ತುತ ಅವಲೋಕನಗಳನ್ನು ಮಾಡಿದ್ದಾರೆ. ಆರೋಪಿಗೆ ಸಂಬಂಧವಿರಲಾರದ ವಿಚಾರಣೆಗಳನ್ನು ಹೈಕೋರ್ಟ್ ನಡೆಸಿರುವುದು ಸರಿಯಲ್ಲ. ಮೊದಲು ಜಾಮೀನು ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಿ ಎಂದು ಹೈಕೋರ್ಟ್ಗೆ ಪೀಠ ನಿರ್ದೇಶನ ನೀಡಿದೆ.
ತಮ್ಮ ಜಾಮೀನು ಅರ್ಜಿಯ ವಿಚಾರಣೆಯನ್ನು ಬೇರೆ ಪೀಠಕ್ಕೆ ವರ್ಗಾಯಿಸುವಂತೆ ಆದೇಶಿಸಲು ಕೋರಿದ್ದ ಮಂಜುನಾಥ್ ಅವರ ಮನವಿಯನ್ನು ಸುಪ್ರೀಂಕೋರ್ಟ್ ಒಪ್ಪಲಿಲ್ಲ. ‘ಕ್ಷಮಿಸಿ, ನಾವು ಎರಡೂ ಕಡೆ ಸಮತೋಲನ ಮಾಡಬೇಕಿದೆ.