ಬೆಂಗಳೂರು, ಸೆ. 14-ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆ ನಾಳೆ ನಡೆಯಲಿದೆ. ಮುಂದಿನ ವಾರ ಮಳೆಗಾಲದ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ ನಾಳಿನ ಸಂಪುಟ ಸಭೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಸಾಮಾನ್ಯವಾಗಿ ವಾರಕ್ಕೊಮ್ಮೆ ಸಚಿವ ಸಂಪುಟ ಸಭೆ ನಡೆಯುವುದು ರೂಢಿಯಾದರೂ ಕಳೆದ ವಾರ ಸಂಪುಟ ಸಭೆ ನಡೆಯಲಿಲ್ಲ.
ಈ ವಾರ ಸೆ.17ರ ಗುರುವಾರ ಮಹಾಲಯ ಅಮವಾಸ್ಯೆಯ ಸರ್ಕಾರಿ ರಜೆ ಇರುವುದರಿಂದ ಗುರುವಾರದ ಬದಲಾಗಿ ನಾಳೆ ಸಂಪುಟ ಸಭೆ ನಡೆಸಲಾಗುತ್ತಿದೆ. ಕೋವಿಡ್ ಇರುವ ಹಿನ್ನೆಲೆಯಲ್ಲಿ ಸಚಿವ ಸಂಪುಟದ ಸಭಾಂಗಣದ ಬದಲಾಗಿ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ನಾಳೆ ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸಂಪುಟ ಸಭೆ ನಡೆಯಲಿದೆ.ಆಡಳಿತಾತ್ಮಕ ವಿಚಾರಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದರ ಜತೆಗೆ ಪ್ರಮುಖವಾಗಿ ಚರ್ಚೆಯಾಗುತ್ತಿರುವ ಡ್ರಗ್ಸ್ ದಂಧೆ, ಡಿ.ಜೆ. ಹಳ್ಳಿ ಪ್ರಕರಣ, ಕೊರೋನಾ, ಎಪಿಎಂಸಿ, ಭೂ ಸುಧಾರಣೆ ಹಾಗೂ ಕೈಗಾರಿಕಾ ಕಾಯ್ದೆ ತಿದ್ದುಪಡಿಗೆ ವಿರೋಧಿಸುತ್ತಿರುವುದು ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳಿವೆ.