ಕಲಬುರಗಿ: ‘ನಗರದ ಹೋಟೆಲ್ ಒಂದದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ. ಗುರುತಿನ ಚೀಟಿ ಪರಿಶೀಲನೆ ನಡೆಸದೆ ರೂಮ್ ಬುಕ್ ಆಗುತ್ತಿವೆ. ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
‘ವೇಶ್ಯಾವಾಟಿಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಒಂದು ಹರಿದಾಡುತ್ತಿದೆ. ಇಂತಹ ವಿಡಿಯೊಗಳಲ್ಲಿ ಬಿಜೆಪಿ ನಾಯಕರು ಸಿಕ್ಕಿ ಬೀಳುತ್ತಿದ್ದಾರೆ. ಇದೇ ಏನು ಬಿಜೆಪಿಯವರು ಮಹಿಳೆಯರ ಬಗ್ಗೆ ನಡೆದುಕೊಳ್ಳುವ ರೀತಿ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
‘ಜಿಲ್ಲೆಯಲ್ಲಿ ಪಡಿತರ ಅಕ್ರಮ ಸಾಗಣೆ, ಗಾಂಜಾ ಮಾರಾಟದಂತಹ ಅಕ್ರಮ ಚಟುವಟಿಕೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಕಮಿಷನರ್‌ಗೆ ದೂರು ಸಲ್ಲಿಸಲಾಗಿದೆ. ಬಿಜೆಪಿಯವರ ಅಕ್ರಮ ಚಟುವಟಿಕೆ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ಪ್ರಶ್ನಿಸಿದ್ದಕ್ಕೆ ಅವರನ್ನು ಬೆದರಿಸಲಾಗುತ್ತಿದೆ. ನಮ್ಮ ಕಾರ್ಯಕರ್ತರು, ನಾಯಕರ ಮೇಲೆ ದೌರ್ಜನ್ಯ ನಡೆಸಲು ಪ್ರಯತ್ನಿಸಿದರೆ ನಾನು ಸುಮ್ಮನಿರಲ್ಲ. ಶಾಸಕ ಎನ್ನುವುದನ್ನೇ ಮರೆತು ನಿಮ್ಮ ಭಾಷೆಯಲ್ಲಿ ಉತ್ತರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
‘ಗ್ರಾಮ ಪಂಚಾಯಿತಿ ಸದಸ್ಯ ಅಯ್ಯಪ್ಪ ರಾಮತೀರ್ಥ ಎಂಬಾತ ಪರಿಶಿಷ್ಟ ಜಾತಿಯ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿ, ಎರಡು ಜಾತಿಗಳ ನಡುವೆ ಸಂಘರ್ಷ ಉಂಟುಮಾಡುವ ಮಾತುಗಳು ಆಡಿದಕ್ಕೆ ಬಂಧಿಸಲಾಗಿದೆ. ನನ್ನ ಬಗ್ಗೆ ಅವಾಚ್ಯ ಪದಗಳಿಂದ ಬೈದಿರುವುದಕ್ಕೆ ಅಲ್ಲ’ ಎಂದು ಸ್ಪಷ್ಟಪಡಿಸಿದರು.
‘ಪೊಲೀಸರು ಬಂಧಿಸಿದಾಗ ಮಣಿಕಂಠ ರಾಠೋಡ ಸೇರಿದಂತೆ ನೂರಾರು ಬಿಜೆಪಿಯವರು ಪೊಲೀಸ್ ಠಾಣೆಗೆ ತೆರಳಿ, ಅವರನ್ನು ಬಿಡುಗಡೆ ಮಾಡುವಂತೆ ಒತ್ತಡ ಹಾಕಿದ್ದಾರೆ. ಮಣಿಕಂಠ ರಾಠೋಡ ಹಾಗೂ ಅವರ ತಂದೆ ನರೇಂದ್ರ ರಾಠೋಡ ಮೇಲೆ ಅಕ್ರಮ ಪಡಿತರ ಸಾಗಣೆಯ ಆರೋಪದಡಿ 40ಕ್ಕೂ ಅಧಿಕ ದೂರು ದಾಖಲಾಗಿವೆ. ರೌಡಿ ಶೀಟ್ ಸಹ ಒಪನ್ ಆಗಿದೆ. ಅವರ ಮೇಲೆಕ್ರಮ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.