ಹುಬ್ಬಳ್ಳಿ(ಜು.07): ಚಂದ್ರಶೇಖರ ಗುರೂಜಿ ನಮಗೆ ಮಾನಸಿಕವಾಗಿ ಸಾಕಷ್ಟು ಕಿರುಕುಳ ನೀಡ್ತಾ ಇದ್ದರು. ಅದಕ್ಕಾಗಿ ನಾವೇ ಕೊಂದಿದ್ದೇವೆ..! ಇದು ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹಂತಕರು ಪೊಲೀಸರ ವಿಚಾರಣೆ ವೇಳೆ ಹೇಳಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಚಂದ್ರಶೇಖರ ಗುರೂಜಿ ಕೊಲೆ ಬಳಿಕ ರಾಮದುರ್ಗ ಮಾರ್ಗವಾಗಿ ಬಾಗಲಕೋಟೆಗೆ ತೆರಳುತ್ತಿದ್ದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ಅವರನ್ನು ಪೊಲೀಸರು ಬಂಧಿಸಿದ್ದರು. ಅಲ್ಲಿಂದ ಅರೆಸ್ಟ್ ಮಾಡಿ ಕರೆದುಕೊಂಡು ಬಂದ ಮೇಲೆ ಬರೋಬ್ಬರಿ 20 ಗಂಟೆಗೂ ಅಧಿಕ ಕಾಲ ಅಜ್ಞಾತ ಸ್ಥಳದಲ್ಲಿಟ್ಟು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಪೊಲೀಸರ ಪ್ರಶ್ನೆಗಳ ಸುರಿಮಳೆಗೆ ಅತ್ಯಂತ ಸರಳವಾಗಿಯೇ ಉತ್ತರ ನೀಡಿರುವ ಆರೋಪಿಗಳಿಬ್ಬರು, ಗುರೂಜಿ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಚಂದ್ರಶೇಖರ ಗುರೂಜಿ ಬಳಿಯೇ 10ರಿಂದ12 ವರ್ಷ ಕೆಲಸ ಮಾಡಿದ್ದೇವೆ. 2016ರಲ್ಲೇ ಕೆಲಸ ಬಿಟ್ಟಿದ್ದೇವೆ. ಅಲ್ಲಿಂದ ಹೊರಬಂದ ಬಳಿಕ ‘ನಮ್ಮ ಪಾಡಿಗೆ ನಾವು ಸ್ವಂತ ಉದ್ಯೋಗ ಮಾಡುತ್ತಾ ಜೀವನ ಸಾಗಿಸುತ್ತಿದ್ದೇವು. ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದೇವೆ. ಆದರೆ ನಮ್ಮ ಪ್ರತಿ ಕೆಲಸಕ್ಕೂ ಗುರೂಜಿ ಅಡ್ಡಗಾಲು ಹಾಕುತ್ತಿದ್ದರು. ಬದುಕುವುದಕ್ಕೂ ಬಿಡುತ್ತಿರಲಿಲ್ಲ, ಅಷ್ಟೊಂದು ಕಿರುಕುಳ ನೀಡುತ್ತಿದ್ದರು. ಮಾನಸಿಕವಾಗಿ ಬಹಳಷ್ಟು ಕಿರುಕುಳ ನೀಡಿದ್ದಾರೆ. ನಾವು ಎಲ್ಲೇ ಯಾವುದೇ ಬಿಜಿನೆಸ್ ಮಾಡಿದರೂ ಅವರ ಪಟಾಲಂ ನಮಗೆ ಬೆದರಿಕೆ ಹಾಕುತ್ತಿತ್ತು. ಒಂದಿಲ್ಲೊಂದು ಸಮಸ್ಯೆಯನ್ನು ತಂದಿಡುತ್ತಿತ್ತು’ ಎಂದು ಹೇಳಿಕೊಂಡಿದ್ದಾರೆ.