ಮುಂಬೈ (ಮಹಾರಾಷ್ಟ್ರ): ಉದ್ಧವ್ ಠಾಕ್ರೆ ವಿರುದ್ಧ ಬಂಡೆದ್ದು ಬಿಜೆಪಿಯ ಬೆಂಬಲದಿಂದ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿರುವ ಏಕನಾಥ್ ಶಿಂದೆ ಇಂದು ವಿಶ್ವಾಸಮತದ ಅಗ್ನಿಪರೀಕ್ಷೆ ಎದುರಿಸುವರು. ನಿನ್ನೆಯಿಂದ ಆರಂಭವಾಗಿರುವ ವಿಶೇಷ ಅಧಿವೇಶನದ ಮೊದಲ ದಿನ ಸ್ಪೀಕರ್ ಆಯ್ಕೆಯಲ್ಲಿ ಗೆದ್ದಿದ್ದ ಶಿಂದೆ ಇಂದಿನ ಪರೀಕ್ಷೆಯಲ್ಲೂ ಸಲೀಸಾಗಿ ಜಯಿಸಲಿದ್ದಾರೆ.
ವಿಶ್ವಾಸಮತವನ್ನು ಗೆಲ್ಲಲು ಬಿಜೆಪಿ ಮತ್ತು ಶಿವಸೇನೆ ಬಂಡಾಯ ಶಾಸಕರು ಸಭೆ ನಡೆಸಿ ರಣತಂತ್ರ ರೂಪಿಸಿದ್ದಾರೆ. ಏಕನಾಥ್ ಶಿಂದೆ ಸರ್ಕಾರಕ್ಕೆ ಅಗತ್ಯ ಬಹುಮತ ಇರುವ ಕಾರಣ ಇಂದಿನ ವಿಶ್ವಾಸಮತ ನಾಮ್ಕೇವಾಸ್ಥೆ ನಡೆಯಲಿದೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 106 ಮತ್ತು ಬಂಡಾಯ ಶಿವಸೇನೆಯ ಬಣದ 39, ಸ್ವತಂತ್ರ ಅಭ್ಯರ್ಥಿಗಳು ಸೇರಿ ನೂತನ ಮುಖ್ಯಮಂತ್ರಿ ಶಿಂದೆಗೆ 164 ಶಾಸಕರ ಬಲವಿದೆ. ವಿಪಕ್ಷಗಳಾದ ಉದ್ಧವ್ ಠಾಕ್ರೆ ಬಣ, ಎನ್ಸಿಪಿ, ಕಾಂಗ್ರೆಸ್ ಸೇರಿದಂತೆ ಉಳಿದ ಪಕ್ಷಗಳು 112 ಸದಸ್ಯರಿದ್ದಾರೆ. ಬಹುಮತ ಸಾಬೀತಿಗೆ 144 ಮತಗಳು ಮಾತ್ರ ಬೇಕಾಗಿವೆ.