Breaking News

ರಜೆಯೂ ಇಲ್ಲ, ಭತ್ಯೆಯೂ ಸಿಗ್ತಿಲ್ಲ!; ಪೊಲೀಸ್ ಕಾನ್​ಸ್ಟೇಬಲ್​ಗಳಿಗೆ ಗೋಳು, ಠಾಣಾಧಿಕಾರಿಗೆ ಇಕ್ಕಟ್ಟು..

Spread the love

ಬೆಂಗಳೂರು :ವರಿಷ್ಠಾಧಿಕಾರಿಗಳ ಆದೇಶ ಒಂದೆಡೆ…, ಹಿರಿಯ ಅಧಿಕಾರಿಗಳ ಒತ್ತಡ ಇನ್ನೊಂದೆಡೆ. ಆದರೆ, ನಲುಗುತ್ತಿರುವವರು ಮಾತ್ರ ಕಾನ್​ಸ್ಟೇಬಲ್​ಗಳು…. ಆರಕ್ಷಕರಿಗೆ ದಿನದ ಹದಿಮೂರು ತಾಸು ಕೆಲಸ ಮಾಡಿದರೂ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ.

ರಜೆಯೂ ಇಲ್ಲ; ಕೆಲಸ ಮಾಡಿದರೆ ಭತ್ಯೆಯೂ ದೊರೆಯದ ಅತಂತ್ರ ಸ್ಥಿತಿ ಅವರದ್ದಾಗಿದೆ. ಹೀಗಾಗಿ ಕಡ್ಡಾಯವಾಗಿ ವಾರದ ರಜೆ ಹಾಗೂ ರಜೆ ಬದಲಿಗೆ ಭತ್ಯೆ ಕೊಡುವ ವಿಚಾರದಲ್ಲಿ ಪೊಲೀಸ್ ಅಧಿಕಾರಿಗಳು ‘ಕಳ್ಳಾಟ’ ಆಡುತ್ತಿರುವ ಆರೋಪ ಕೇಳಿಬಂದಿದೆ.

ಕಡ್ಡಾಯವಾಗಿ ವಾರದ ರಜೆ ಕೊಡಬೇಕು ಎಂದು ಡಿಜಿಪಿ ಪ್ರವೀಣ್ ಸೂದ್ ಹೊರಡಿಸಿರುವ ಆದೇಶವೇ ಈಗ ಪೊಲೀಸರ ರಜೆ ಭತ್ಯೆಗೆ ಸಮಸ್ಯೆಯಾಗಿದೆ. ವಾರದ ರಜೆ ಕೊಡುವುದು ಹಾಗೂ ಭತ್ಯೆಗೆ ಬಿಲ್ಲುಗಳನ್ನು ಕಳುಹಿಸುವ ವಿಚಾರದಲ್ಲಿ ಠಾಣಾಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ. ಕೋವಿಡ್ ನಿರ್ಬಂಧ ತೆರವಾದ ಬಳಿಕ ಗ್ರಾಮೀಣ ಪ್ರದೇಶದಲ್ಲಿ 2 ವರ್ಷ ಸ್ಥಗಿತಗೊಂಡಿದ್ದ ಜಾತ್ರೆ, ಉತ್ಸವಗಳು ಸಾಲುಸಾಲಾಗಿ ನಡೆಯುತ್ತಿವೆ.

ಇದರ ಜತೆಗೆ ರಾಷ್ಟ್ರೀಯ ಹಬ್ಬಗಳು, ಅಂಬೇಡ್ಕರ್, ಬಸವ, ಗಾಂಧಿ ಜಯಂತಿ ಮೊದಲಾದ ಆಚರಣೆಗಳು ಸಾಗಿವೆ. ಇದೆಲ್ಲದರ ಜತೆಗೆ ಹಿಜಾಬ್, ಧಾರ್ವಿುಕ ಕೇಂದ್ರಗಳಲ್ಲಿ ಲೌಡ್ ಸ್ಪೀಕರ್ ಗಲಾಟೆಯಿಂದಾಗಿ ಶಾಲೆ ಹಾಗೂ ಧಾರ್ವಿುಕ ಕೇಂದ್ರಗಳ ಮುಂದೆ ತಿಂಗಳುಗಟ್ಟಲೆ ಬಂದೋಬಸ್ತ್ ಒದಗಿಸುವಲ್ಲಿ ಪೊಲೀಸರು ಹೈರಾಣಾಗಿದ್ದಾರೆ.

ಕಾನ್​ಸ್ಟೇಬಲ್ ಹಾಗೂ ಹೆಡ್ ಕಾನ್​ಸ್ಟೇಬಲ್​ಗಳಿಗೆ ಕಡ್ಡಾಯವಾಗಿ ವಾರದ ರಜೆ ಕೊಡಬೇಕು ಎಂದು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಈಗಾಗಲೇ ಹಲವು ಬಾರಿ ಆದೇಶ ಹಾಗೂ ಸ್ಪಷ್ಟನೆ ನೀಡಿದೆ. 2021ರ ಜ.28ರಂದು ಡಿಜಿಪಿ ಪ್ರವೀಣ್ ಸೂದ್ ಮರುಆದೇಶ ಹೊರಡಿಸಿ, ಪೊಲೀಸರ ದೈಹಿಕ ಹಾಗೂ ಮಾನಸಿಕ ಸದೃಢತೆಗಾಗಿ ಕಡ್ಡಾಯವಾಗಿ ವಾರದ ರಜೆ ಕೊಡಬೇಕು ಎಂದು ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದರು. ಎಸ್ಪಿಗಳು ಎಲ್ಲ ಘಟಕದ ಮುಖ್ಯಸ್ಥರಿಗೆ ಡಿಜಿಪಿ ಆದೇಶವನ್ನು ರವಾನಿಸಿದ್ದರು. ರಜೆ ಬಿಟ್ಟು ಕೆಲಸ ಮಾಡಿದ ಕಾನ್​ಸ್ಟೇಬಲ್​ಗಳಿಗೆ ಈ ಆದೇಶವೇ ಭತ್ಯೆ ಸಿಗದಂತೆ ಮಾಡಿದೆ.

ಅಧಿಕಾರಿಗಳಿಗೆ ಭತ್ಯೆ ಇಲ್ಲ: ಸಹಾಯಕ ಸಬ್ ಇನ್​ಸ್ಪೆಕ್ಟರ್ ಮೇಲ್ಪಟ್ಟ ಅಧಿಕಾರಿಗಳಿಗೆ 2 ಮತ್ತು 4ನೇ ಶನಿವಾರ ಹಾಗೂ ಸಾರ್ವತ್ರಿಕ ರಜೆಗಳು ಲಭ್ಯವಿವೆ. ರಜೆ ದಿನ ಕೆಲಸ ಮಾಡಿದರೆ ಅವರಿಗೆ ಯಾವುದೇ ಭತ್ಯೆ ಸೌಲಭ್ಯ ಇಲ್ಲ. ಅಧಿಕಾರಿಗಳಿಗೂ ರಜೆ ಸಿಗುವುದಿಲ್ಲ.

ಕಾನ್​ಸ್ಟೇಬಲ್ಸ್ ಕೇಳೋದೇನು?

  • ಕಡ್ಡಾಯ ರಜೆ ಆದೇಶವನ್ನು ಕೈಬಿಟ್ಟು ರಜೆ ಮನವಿ ತಂದವರಿಗೆ ರಜೆ ಕೊಡಬೇಕು
  • ರಜೆ ಬೇಡವೆಂದು ಕೆಲಸ ಮಾಡಿದ ಎಲ್ಲ ದಿನಕ್ಕೂ ಭತ್ಯೆಯನ್ನು ಕೊಡಬೇಕು
  • ರಜೆ ಕೊಡದೆ ಭತ್ಯೆ ಬಿಲ್ಲುಗಳನ್ನು ಕಳುಹಿಸಿದರೆಂದು ಶಿಸ್ತುಕ್ರಮ ಕೈಗೊಳ್ಳು ವುದನ್ನು ಕೈಬಿಡಬೇಕು

ಕೊಟ್ಟರೂ ಕಷ್ಟ, ಕೊಡದಿದ್ದರೂ ಕಷ್ಟ!
ಎಲ್ಲರಿಗೂ ವಾರದ ರಜೆ ಕೊಟ್ಟರೆ ಬಂದೋಬಸ್ತ್​ಗೆ ಸಿಬ್ಬಂದಿ ಇರಲ್ಲ. ರಜೆ ಕೊಡದಿದ್ದರೆ ಅವರಿಗೆ ಭತ್ಯೆ ಕೊಡಬೇಕು. ಭತ್ಯೆ ಕೊಡಲು ಠಾಣೆಯ ಸಬ್ ಇನ್​ಸ್ಪೆಕ್ಟರ್ ಅಥವಾ ಇನ್​ಸ್ಪೆಕ್ಟರ್ ಬಿಲ್ಲುಗಳನ್ನು ಎಸ್ಪಿ ಕಚೇರಿಗೆ ಕಳುಹಿಸಬೇಕು. ಅಲ್ಲಿಂದ ಡಿಜಿಪಿ ಕಚೇರಿಗೆ ಹೋಗಿ ಅನುಮೋದನೆ ಸಿಕ್ಕ ನಂತರ ರಜೆ ದಿನ ಕೆಲಸ ಮಾಡಿದ ಪೊಲೀಸರಿಗೆ 200 ರೂ. ಭತ್ಯೆ ಸಿಗುತ್ತದೆ. ಭತ್ಯೆಗಾಗಿ ಬಿಲ್ಲುಗಳನ್ನು ಕಳುಹಿಸಿದರೆ ಡಿಜಿಪಿ ಆದೇಶದ ಹೊರತಾಗಿಯೂ ರಜೆ ಕೊಟ್ಟಿಲ್ಲ ಎಂಬ ಕಾರಣಕ್ಕೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಸ್ಪಿಗಳು ಹೆದರಿಸುತ್ತಿದ್ದಾರೆ. ಹೀಗಾಗಿ ಸಬ್ ಇನ್​ಸ್ಪೆಕ್ಟರ್ ಹಾಗೂ ಇನ್​ಸ್ಪೆಕ್ಟರ್​ಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

4 ದಿನದ ಕೆಲ್ಸಕ್ಕೆ 2 ದಿನಕ್ಕಷ್ಟೇ ಭತ್ಯೆ!
ಬೆಂಗಳೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಾರದ ರಜೆ ಸಿಗುತ್ತಿಲ್ಲ. ರಜೆ ಕೊಡದೆ ಭತ್ಯೆಗೆ ಬಿಲ್ಲುಗಳನ್ನು ಕಳುಹಿಸಿದರೆ ಎಸ್ಪಿ ಹಾಗೂ ಡಿಜಿಪಿ ಗರಂ ಆಗುತ್ತಾರೆ ಎಂಬ ಕಾರಣಕ್ಕೆ ಠಾಣಾಧಿಕಾರಿಗಳು ಹೊಸ ಉಪಾಯ ಕಂಡುಕೊಂಡಿದ್ದಾರೆ. ತಿಂಗಳ ನಾಲ್ಕು ರಜೆಗಳ ಪೈಕಿ 2 ದಿನವನ್ನು ವಾರದ ರಜೆ ಎಂದು ತೋರಿಸಿ ಇನ್ನೆರಡು ದಿನಕ್ಕೆ ಮಾತ್ರ ಭತ್ಯೆಯನ್ನು ಕೊಡಲಾಗುತ್ತಿದೆ. ಆದರೆ, ಎಲ್ಲ ರಜಾ ದಿನಗಳಲ್ಲೂ ಕೆಲಸ ಮಾಡುವುದು ತಪುಪತ್ತಿಲ್ಲ.

ಕರ್ತವ್ಯ ನಿರ್ವಹಣೆಗೆ ಸಿಬ್ಬಂದಿ ಕೊರತೆ
ಜಿಲ್ಲಾ ಸಶಸ್ತ್ರ ಪಡೆಯಲ್ಲಿ (ಡಿಎಆರ್) 360 ರಿಂದ 400 ಸಿಬ್ಬಂದಿ ಇದ್ದಾರೆ. ವಾರದ ರಜೆ ಕಡ್ಡಾಯವಾಗಿ ಕೊಟ್ಟರೆ ಪ್ರತಿನಿತ್ಯ 30 ರಿಂದ 40 ಜನಕ್ಕೆ ಕೊಡಬೇಕಾಗುತ್ತದೆ. ಅದೇ ರೀತಿ ನಗರ ಸಶಸ್ತ್ರ ಪಡೆಯಲ್ಲಿ (ಸಿಎಆರ್) 600 ರಿಂದ 700 ಸಿಬ್ಬಂದಿ ಇದ್ದಾರೆ. ಪ್ರತಿನಿತ್ಯ 60 ರಿಂದ 70 ಸಿಬ್ಬಂದಿಗೆ ರಜೆ ಕೊಡಬೇಕಾಗುತ್ತದೆ. ಅಷ್ಟೂ ಜನಕ್ಕೆ ರಜೆ ಕೊಟ್ಟರೆ ಭದ್ರತೆಗೆ ನಿಯೋಜಿಸಲು ಪೊಲೀಸರ ಕೊರತೆ ಕಾಡಲಿದೆ. ಕಾನೂನು ಸುವ್ಯವಸ್ಥೆ ಠಾಣೆಗಳಲ್ಲೂ ಇದೇ ಪರಿಸ್ಥಿತಿ ಇದೆ ಎನ್ನುತ್ತಾರೆ ಅಧಿಕಾರಿಗಳು.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ