ಹೈದರಾಬಾದ್, ಜೂ.30: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಾಧ್ಯಕ್ಷ ಕೆ. ಟಿ. ರಾಮರಾವ್ ಗುರುವಾರ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಗಳು ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಹಿನ್ನೆಲೆ ಇದು ಬಿಜೆಪಿ ಸಾಧನೆಗಳೆಂದು ಹೇಳುತ್ತಾ “ಬೈ ಬೈ ಮೋದಿ” ಎಂದು ಹೇಳುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಹೈದರಾಬಾದ್‌ನಲ್ಲಿ ತಮ್ಮ ಪಕ್ಷದ ಸಭೆಯಲ್ಲಿ ಮಾತನಾಡಿದ ರಾಮರಾವ್, ಜುಲೈ 2 ಮತ್ತು 3 ರಂದು ನಡೆಯಲಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಉಲ್ಲೇಖಿಸಿ, ಅನೇಕ ಪ್ರವಾಸಿಗರು ತೆಲಂಗಾಣಕ್ಕೆ ಬರುತ್ತಾರೆ ಮತ್ತು ಹೋಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಭಾರತದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ವಿಶ್ವದಲ್ಲೇ ಅತಿ ಹೆಚ್ಚಾಗಿದೆ. ಭಾರತದ ಸ್ವಾತಂತ್ರ್ಯಕ್ಕೆ ಬಂದ 75 ವರ್ಷಗಳಲ್ಲಿ ಮೋದಿ ರೂಪಾಯಿ ಮೌಲ್ಯವನ್ನು 79 ರೂ.ಗೆ ತಂದರು. ಬಿಜೆಪಿ ನಾಯಕರು ನಿಮ್ಮ ಕ್ಷೇತ್ರಗಳಿಗೆ ಬಂದು ಭೇಟಿ ನೀಡಿದಾಗ ಅವರನ್ನು ಜನರು ಪ್ರಶ್ನಿಸಬೇಕು. ಹೀಗಾಗಿ ಈಗ ಮೋದಿಗೆ ‘ಬೈ ಬೈ’ ಹೇಳುವ ಸಮಯ ಬಂದಿದೆ ಎಂದು ತೆಲಂಗಾಣ ಕೈಗಾರಿಕಾ ಸಚಿವ ರಾಮರಾವ್ ಹೇಳಿದ್ದಾರೆ.
ತೆಲಂಗಾಣದ ಎಲ್ಲಾ 119 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ನಾಯಕರು ಬಂದು ಭೇಟಿ ನೀಡಲಿದ್ದು, ಅವರು ಭೇಟಿ ನೀಡಿದಾಗ ಕೆ. ಚಂದ್ರಶೇಖರ ರಾವ್ ಅವರ ಸರ್ಕಾರದ ಪ್ರಮುಖ ಯೋಜನೆಗಳಾದ ರೈತರಿಗೆ ಉಚಿತ ವಿದ್ಯುತ್ ಅನ್ನು ಹೇಗೆ ಜಾರಿಗೆ ತರಬೇಕು ಎಂಬುದನ್ನು ಜನರು ವಿವರಿಸಬೇಕು ಹಾಗೂ ಅವುಗಳನ್ನು ದೇಶದಾದ್ಯಂತ ಬಿಜೆಪಿ ಪಕ್ಷದ ನಾಯಕರು ಜಾರಿಗೊಳಿಸಲು ಒತ್ತಾಯಿಸಬೇಕು ಎಂದು ಹೇಳಿದ್ದಾರೆ.