ಚುನಾವಣೆ ಸಮೀಪ ಬರುತ್ತಿದ್ದಂತೆಯೇ ಎಂಇಎಸ್ ನಾಯಕರಿಗೆ ಭಾಷಾ ಪ್ರೇಮ ಹೆಚ್ಚಾಗುತ್ತದೆ. ಭಾಷಾ ವೈಷಮ್ಯದ ವಿಷ ಬೀಜ ಬಿತ್ತಿ ರಾಜಕೀಯ ಮಾಡುತ್ತಲೇ ಬಂದಿರುವ ಎಂಇಎಸ್ ಎಲ್ಲ ರಂಗಗಳಲ್ಲಿ ಅಧಿಕಾರ ಕಳೆದುಕೊಂಡು ಕಂಗಾಲಾಗಿದ್ದು, ಮರಾಠಿ ಫಲಕ, ಮರಾಠಿ ಕಾಗದಪತ್ರ ಎಂದು ಮತ್ತೆ ಕಾಲು ಕೆದರಿ ಜಗಳಕ್ಕೆ ನಿಂತಿರುವ ಎಂಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಭಾಷಾ ಅಲ್ಪ ಸಂಖ್ಯಾತ ಆಯೋಗದ ಆದೇಶ ಇಡೀ ದೇಶಕ್ಕೆ ಅನ್ವಯ ಆಗುತ್ತದೆ. ಈ ಆದೇಶವನ್ನು ಮಹಾರಾಷ್ಟ್ರ ಸರ್ಕಾರ ಮಹಾರಾಷ್ಟ್ರದ ಸೊಲ್ಲಾಪೂರ,ಸೇರಿದಂತೆ,ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಪ್ರದೇಶಗಳಲ್ಲಿ ಜಾರಿ ಮಾಡಿದೆಯಾ..? ಅನ್ನೋದನ್ನು ಈ ಎಂಇಎಸ್ ನಾಯಕರು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಭಾಷಾ ಅಲ್ಪ ಸಂಖ್ಯಾತರ ಆಯೋಗದ ಆದೇಶವನ್ನು ಮಹಾರಾಷ್ಟç ಸರ್ಕಾರವೇ ಪಾಲಿಸಿಲ್ಲ, ಅವರು ಪಾಲಿಸದ ಆದೇಶವನ್ನು ಕರ್ನಾಟಕದಲ್ಲಿ ಅನುಷ್ಠಾನ ಮಾಡಬಾರದು. ಎಂಇಎಸ್ ಮೊಂಡು ವಾದಕ್ಕೆ ಸರ್ಕಾರ ಮನ್ನಣೆ ನೀಡಬಾರದು. ಮಹಾರಾಷ್ಟçದ ಅನೇಕ ಪ್ರದೇಶಗಳಲ್ಲಿ ಕನ್ನಡಿಗರು ಅತೀ ಹೆಚ್ವಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಆದ್ರೆ ಅಲ್ಲಿಯ ಕನ್ನಡಿಗರಿಗೆ ಮಹಾರಾಷ್ಟç ಸರ್ಕಾರ ಯಾವುದೇ ರೀತಿಯ ಭಾಷಾ ಸವಲತ್ತುಗಳನ್ನು ಕೊಡುತ್ತಿಲ್ಲ. ಹೀಗಾಗಿ ಭಾಷಾ ಅಲ್ಪಸಂಖ್ಯಾತರ ಆಯೋಗದ ಆದೇಶವನ್ನು ಪಾಲಿಸುವಂತೆ ಎಂಇಎಸ್ ನಾಯಕರು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಕೊಟ್ಟಿರುವ ಮನವಿಯನ್ನು ಕಸದ ಬುಟ್ಟಿಗೆ ಎಸೆಯಬೇಕು ಎಂದು ದೀಪಕ ಗುಡಗನಟ್ಟಿ ಆಗ್ರಹಿಸಿದ್ದಾರೆ.