ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ಸತೀಶ್ ಪಾಟೀಲ ಹತ್ಯೆ ಹಾಗೂ ಬಳಿಕ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಧಿಸಿದಂತೆ ಮತ್ತೆ ಮೂವರು ಆರೋಪಿಗ¼ನ್ನು ಪೊಲೀಸರು ವಶಕ್ಕೆ ಪಡೆದಿದ್ದು ಬಂಧಿತರ ಸಂಖ್ಯೆ 32 ಕ್ಕೆ ಏರಿಕೆಯಾಗಿದೆ.
ಜೂನ್ 18ರಂದು ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ಸತೀಶ್ ಪಾಟೀಲ ಹತ್ಯೆ ಯಾಗಿತ್ತು. ಇನ್ನು ಹತ್ಯೆಯನ್ನು ಖಂಡಿಸಿ ಗ್ರಾಮದಲ್ಲಿ ರಾತ್ರಿವೇಳೆ ಹಿಂಸಾಚಾರವೂ ಕೂಡ ನಡೆದಿತ್ತು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಕೊಲೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಕೊಲೆ ಬಳಿಕ ನಡೆದ ಹಿಂಸಾಚಾರ ಪ್ರಕರಣ ಸಂಬಂಧ 22 ಆರೋಪಿಗಳ ಬಂಧನವಾಗಿದೆ. ಒಟ್ಟಾರೆ ಕೊಲೆ ಹಾಗೂ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ಸಧ್ಯ 32ಕ್ಕೆ ಏರಿಕೆಯಾಗಿದೆ.
ಈ ಸಂಬಂಧ ಪೊಲೀಸರು, ಆನಂದ ಕುಟ್ರೆ (60), ಜಾಯಪ್ಪ ನೀಲಜಕರ (52) ಸುರೇಖಾ ನೀಲಜಕರ (47) ಸಂಜನಾ ನೀಲಜಕರ (21) ವೆಂಕಟೇಶ ಕುಟ್ರೆ (50) ದೌಲತ್ ಮುತಗೇಕರ (21) ಲಖನ್ ನೀಲಜಕರ (25) ಲಕ್ಷ್ಮಿ ಕುಟ್ರೆ (45) ಸಂಗೀತಾ ಕುಟ್ರೆ (45) ಶಶಿಕಲಾ ಕುಟ್ರೆ (50) ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳೆಲ್ಲರೂ ಗೌಂಡವಾಡ ಗ್ರಾಮದ ನಿವಾಸಿಗಳಾಗಿದ್ದಾರೆ.
ಗೌಂಡವಾಡ ಗ್ರಾಮದ ಸತೀಶ ಪಾಟೀಲ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಬುಧವಾರ ಮೃತ ಸತೀಶ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಹಲಾವರು ವರ್ಷಗಳಿಂದ ಸತೀಶ ದೇವಸ್ಥಾನದ ಜಮೀನು ಕಬಳಿಕೆ ಮಾಡುವವರ ವಿರುದ್ಧ ಹೋರಾಟ ನಡೆಸಿಕೊಂಡು ಬರುತ್ತಿದ್ದ ಇದನ್ನು ಸಹಿಸದ ಕೆಲ ಕಿಡಿಗೇಡಿಗಳು ಸತೀಶ ಪಾಟೀಲನನ್ನು ಕೊಲೆ ಮಾಡಿದ್ದಾರೆ. ಕೊಲೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸತೀಶ್ ಪಾಟೀಲ್ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಗ್ರಹಿಸಿದರು. ಇನ್ನು ಈ ವೇಳೆ ತನಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸುವಂತೆ ಸತೀಶ್ ಪಾಟೀಳ್ ಪತ್ನಿ ಗೋಳಾಡಿದರು.