ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ NDA ಒಕ್ಕೂಟ ತನ್ನ ಅಭ್ಯರ್ಥಿಯನ್ನ ಪ್ರಕಟಿಸಿದೆ. ಇಂದು ನಡೆದ ಸಂಸದೀಯ ಸಭೆ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು, ಒಡಿಶಾದ ಬುಡಕಟ್ಟು ಸಮುದಾಯದ ಮಹಿಳೆ ದ್ರೌಪದಿ ಮುರ್ಮು ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ.
ಬಿಜೆಪಿಯ ಈ ಘೋಷಣೆ ಬೆನ್ನಲ್ಲೇ ದ್ರೌಪತಿ ಮುರ್ಮು ಯಾರು ಎಂಬ ಚರ್ಚೆಗಳು ಶುರುವಾಗಿವೆ. ಮುರ್ಮು ದೇಶದ ಮೊದಲ ಬುಡಕಟ್ಟು ಮಹಿಳಾ ಗವರ್ನರ್ ಎಂಬ ಬಿರುದನ್ನ ಪಡೆದುಕೊಂಡಿದ್ದಾರೆ. 2015-2021ರವರೆಗೆ ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.
ಜೂನ್ 20, 1958 ರಂದು ಜನಿಸಿದ್ದ ಮುರ್ಮು, ಒಡಿಶಾದ ಭುವನೇಶ್ವರದ ರಮಾದೇವಿ ಮಹಿಳಾ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಇವರು ಪದವೀಧರರು. ಇವರಿಗೆ ಒಬ್ಬ ಮಗಳಿದ್ದು, ಅವರ ಹೆಸರು ಇತಿಶ್ರೀ ಮುರ್ಮು. ಬುಡಕಟ್ಟು ಸುಮುದಾಯದಲ್ಲಿ ಜನಿಸಿದ್ದ ಮುರ್ಮು ಜೀವನವು ಆರಂಭದಲ್ಲಿ ತುಂಬಾ ಕಷ್ಟಕರವಾಗಿತ್ತು. ಹೀಗಿದ್ದೂ ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಕೊಡುಗೆ ನೀಡಬೇಕು ಅನ್ನೋ ಹಂಬಲ ಇತ್ತು. ಸಮಾಜದ ಉನ್ನತಿಗೆ ದುಡಿಯಬೇಕೆಂಬ ತುಡಿತ ಅವರಲ್ಲಿತ್ತು. ಅದಕ್ಕಾಗಿಯೇ ಅವರು ರಾಯರಂಗಪುರದ ಶ್ರೀ ಅರಬಿಂದೋ ಶಿಕ್ಷಣ ಕೇಂದ್ರದಲ್ಲಿ ವೇತನವಿಲ್ಲದೇ ಮಕ್ಕಳಿಗೆ ಪಾಠ ಮಾಡಿರುವ ವರದಿಯಾಗಿದೆ.
ಮುರ್ಮು ರಾಜಕೀಯ ಹಾದಿ
ಮುರ್ಮು, 2013 ರಿಂದ 2015ರವರೆಗೆ ಬಿಜೆಪಿ ಎಸ್.ಟಿ. (ST) ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದರು. 2010 ರಲ್ಲಿ ಮಯೂರ್ಭಂಜ್ (ಪಶ್ಚಿಮ)ನಿಂದ ಬಿಜೆಪಿಯ ಜಿಲ್ಲಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. 2007ರಲ್ಲಿ ಒಡಿಶಾದ ಅತ್ಯುತ್ತಮ ಶಾಸಕರಿಗಾಗಿ ‘ನೀಲಕಂಠ ಪ್ರಶಸ್ತಿ’ಯನ್ನ ಸ್ವೀಕಾರ ಮಾಡಿದ್ದಾರೆ. 2006-2009ರ ಅವಧಿಯಲ್ಲಿ ಬಿಜೆಪಿಯ ಎಸ್.ಟಿ. ಮೋರ್ಚಾದ ರಾಜ್ಯಾಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ 2002-2009 ಅವಧಿಯಲ್ಲಿ ಮುರ್ಮು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಇವರು ಒಡಿಶಾದ ರೈರಂಗಪುರ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಮುರ್ಮು, 2000-2004 ರಲ್ಲಿ ಒಡಿಶಾ ಸರ್ಕಾರದಲ್ಲಿ ಸಾರಿಗೆ ಮತ್ತು ವಾಣಿಜ್ಯ ಸಚಿವರಾಗಿದ್ದರು. ಜೊತೆಗೆ ಮೀನುಗಾರಿಕೆ, ಪಶುಸಂಗೋಪನೆ ಸೇರಿದಂತೆ ಹಲವು ಇಲಾಖೆಗಳನ್ನ ಮುನ್ನೆಡಿಸಿದ ಕೀರ್ತಿ ಇವರಿಗಿದೆ.
ರಾಷ್ಟ್ರಪತಿಯಾದರೆ..
ಒಂದು ವೇಳೆ ಚುನಾವಣೆಯಲ್ಲಿ ದ್ರೌಪದಿ ಮುರ್ಮು, ಆಯ್ಕೆಯಾದರೆ ಭಾರತದ ಇತಿಹಾಸದಲ್ಲೇ ಬುಡಕಟ್ಟು ಸಮುದಾಯದ ಮೊದಲ ರಾಷ್ಟ್ರಪತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಪ್ರತಿಭಾ ಪಾಟೀಲ್ ನಂತರ ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ಅನ್ನೋ ಕೀರ್ತಿ ಮುರ್ಮುಗೆ ಸಿಗಲಿದೆ. ಜೊತೆಗೆ ಒಡಿಶಾ ರಾಜ್ಯದಿಂದ ಬಂದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ಕೂಡ ಸಿಗಲಿದೆ. ಇನ್ನು ದ್ರೌಪದಿ ಮುರ್ಮು ಜಾರ್ಖಂಡ್‌ನ ಮೊದಲ ಮಹಿಳಾ ಗವರ್ನರ್. ಒಡಿಶಾದ ಮೊದಲ ಮಹಿಳೆ ಮತ್ತು ಬುಡಕಟ್ಟು ನಾಯಕಿ ದೇಶದ ರಾಜ್ಯವೊಂದರಲ್ಲಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.
ಇನ್ನು ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳು ಜಂಟಿ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನು ಕಣಕ್ಕಿಳಿಸಿವೆ. ಹಾಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವಧಿ ಜುಲೈ 24ಕ್ಕೆ ಕೊನೆಗೊಳ್ಳಲಿದೆ. ಮುಂದಿನ ರಾಷ್ಟ್ರಪತಿ ಚುನಾವಣೆಗೆ ಜುಲೈ 18 ರಂದು ಮತದಾನ ನಡೆಯಲಿದೆ. ಜೂನ್ 29 ನಾಮಪತ್ರ ಸಲ್ಲಿಸಲು ಕೊನೆಯ ದಿನ.