ರಬಕವಿ–ಬನಹಟ್ಟಿ: ಬಡತನದಲ್ಲಿಯೇ ಹುಟ್ಟಿ ಬೆಳೆದು, ನಿರಂತರ ಅಧ್ಯಯನ, ಕಠಿಣ ಪರಿಶ್ರಮದ ಮೂಲಕ ಇಡ್ಲಿ ಮಾರಿ ಜೀವನ ನಡೆಸಿತ್ತಿರುವ ವ್ಯಾಪಾರಿಯ ಪುತ್ರಿ ದ್ವಿತೀಯ ಪಿಯುಸಿಯಲ್ಲಿ ಶೇ.
97.5 ರಷ್ಟು ಅಂಕ ಗಳಿಸಿ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾಳೆ. ಇದರೊಂದಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಕನಸಿಗೆ ರೆಕ್ಕೆ ಕಟ್ಟಿದ್ದಾಳೆ.
ರಬಕವಿಯ ಬ್ರಹ್ಮಾನಂದ ಆಶ್ರಮ ಹತ್ತಿರ ಬಾಡಿಗೆ ಶೆಡ್‌ನಲ್ಲಿ ವಾಸ ಹೊಂದಿರುವ ಪ್ರಕಾಶ ಹನಗಂಡಿಯವರ ಮಗಳು ದಾನೇಶ್ವರಿ ಈ ಸಾಧನೆ ಮಾಡಿದ ಪ್ರತಿಭಾನ್ವಿತೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.99 ರಷ್ಟು ಅಂಕದೊಂದಿಗೆ ಬಾಗಲಕೋಟೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಳು. ಇದೀಗ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 585 ಅಂಕಗಳೊಂದಿಗೆ ಶೇ.97.5 ರಷ್ಟು ಅಂಕ ಪಡೆದು ಎಸ್‌ಆರ್‌ಎ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದು ಸಾಧನೆಗೈದಿದ್ದಾಳೆ. ಈಕೆ ಕನ್ನಡ-100, ರಸಾಯನ ಶಾಸ್ತ್ರ- 100, ಗಣಿತ-100, ಜೀವಶಾ-96, ಭೌತಶಾಸ್ತ್ರ-96 ಹಾಗು ಇಂಗ್ಲೀಷ್-93 ಅಂಕ ಪಡೆದಿದ್ದಾಳೆ.
ತಂದೆ ಪ್ರಕಾಶ್ ದಿನಾಲೂ ಇಡ್ಲಿ ಸಾಂಬಾರ್ ಮನೆಯಲ್ಲಿ ತಯಾರಿಸಿ ಸುತ್ತಲಿನ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಅಲ್ಲಿರುವ ರೋಗಿಗಳಿಗೆ ಅಗ್ಗದ ದರದಲ್ಲಿ ಮಾರಾಟ ಮಾಡುತ್ತಾರೆ. ಈ ಕಾರ್ಯಕ್ಕೆ ಈಕೆಯೂ ತನ್ನ ತಾಯಿಯೊಂದಿಗೆ ಕೈ ಜೋಡಿಸಿದ್ದಾಳೆ. ಪ್ರಕಾಶ್ ಪ್ರತಿದಿನ ಕೇವಲ 200 ರೂ.ಗಳಷ್ಟು ಆದಾಯ ಮಾಡುತ್ತ ಕುಟುಂಬದೊಂದಿಗೆ ಮಕ್ಕಳ ಶಿಕ್ಷಣಕ್ಕೆ ಅಣಿಯಾಗುತ್ತಿದ್ದಾರೆ.