ಕಾರವಾರ: ಸಾಮರ್ಥ್ಯಕ್ಕಿಂತ ಹೆಚ್ಚು ಸರಕು ಸಾಗಿಸುತ್ತಿದ್ದ ಲಾರಿಯ ಚಾಲಕನಿಗೆ ಇಲ್ಲಿನ ನ್ಯಾಯಾಲಯವು ₹ 46 ಸಾವಿರ ದಂಡ ವಿಧಿಸಿದೆ. ಅಲ್ಲದೇ ವಾಹನದ ಸರಕು ಸಾಗಣೆ ಪರವಾನಗಿ ಹಾಗೂ ಚಾಲಕನ ವಾಹನ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಿದೆ.
ಶಿವಮೊಗ್ಗದ ಮೊಹಮ್ಮದ್ ಅಮೀರ್ ಪಾಷಾ ಶಿಕ್ಷೆಗೆ ಗುರಿಯಾದ ಚಾಲಕ. ಜೂನ್ 16ರಂದು ರಾತ್ರಿ ನಗರದ ಮೂಲಕ ಸಾಗುತ್ತಿದ್ದ ಲಾರಿಯಲ್ಲಿ ಮಿತಿ ಮೀರಿದ ಪ್ರಮಾಣದಲ್ಲಿ ಸ್ಟೀಲ್ ಸರಕು ಸಾಗಿಸಲಾಗುತ್ತಿತ್ತು. ಅಂದು ಗಸ್ತಿನಲ್ಲಿದ್ದ ನಗರದ ಸಂಚಾರ ಠಾಣೆಯ ಪಿ.ಎಸ್.ಐ ನಾಗಪ್ಪ ಮತ್ತು ಸಿಬ್ಬಂದಿ ಗದಿಗೆಪ್ಪ ಚಕ್ರಸಾಲಿ, ಮೌಲಾಲಿ ನದಾಫ್ ಅವರು ತಡೆದು ಪರಿಶೀಲಿಸಿದ್ದರು. ಬಳಿಕ ಲಾರಿಯನ್ನು ಜಪ್ತಿ ಮಾಡಿದ್ದರು.
ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಕಾರವಾರದ ಹಿರಿಯ ಸಿವಿಲ್ ಹಾಗೂ ಮುಖ್ಯ ನ್ಯಾಯಾಂಗ ನ್ಯಾಯಾಧೀಶರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಶನಿವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ರೇಷ್ಮಾ ರೋಡ್ರಿಗಸ್ ಅವರು, ವಾಹನ ಚಾಲಕನಿಗೆ ದಂಡ ವಿಧಿಸಿ ಆದೇಶಿಸಿದರು.