(ಬೆಳಗಾವಿ ಜಿಲ್ಲೆ): ಇಲ್ಲಿನ ಯಲ್ಲಮ್ಮನ ಗುಡ್ಡದಲ್ಲಿ ದೇವಸ್ಥಾನದೊಳಕ್ಕೆ ನುಗ್ಗಿದ್ದ ಮಳೆ ನೀರನ್ನು ಹೊರಹಾಕಿ ಶುಚಿಗೊಳಿಸಲಾಗಿದ್ದು ಶುಕ್ರವಾರ ಭಕ್ತರು ಎಂದಿನಂತೆ ದೇವಿಯ ದರ್ಶನ ಪಡೆದರು.
ಗುರುವಾರ ಸಂಜೆ ಸುರಿದ ಧಾರಾ ಕಾರ ಮಳೆಯಿಂದಾಗಿ ಸುತ್ತಲಿನ ಗುಡ್ಡದ ಪ್ರದೇಶದಿಂದ ಅಪಾರ ಪ್ರಮಾಣದ ನೀರು ಹರಿದುಬಂದಿತ್ತು.
ಚರಂಡಿಗಳಲ್ಲಿ ಹೂಳು ತುಂಬಿದ್ದರಿಂದ ನೀರು ದೇವಸ್ಥಾನದ ಪ್ರಾಂಗಣಕ್ಕೆ ನುಗ್ಗಿತ್ತು. ಇದರಿಂದ ಭಕ್ತರು ಪರದಾಡಿದ್ದರು.
ಎಚ್ಚೆತ್ತುಕೊಂಡ ಅಧಿಕಾರಿಗಳು ರಾತ್ರಿಯೇ ಚರಂಡಿ ಸ್ವಚ್ಛಗೊಳಿಸಿ, ನೀರು ಹರಿದು ಹೋಗಲು ಅನುವು ಮಾಡಿದರು. ನಸುಕಿನಿಂದಲೇ ಭಕ್ತರು ದೇವಿ ದರ್ಶನಕ್ಕೆ ಬಂದರು. ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು.
‘ಪ್ರತಿ ಬಾರಿ ಮಳೆ ಬಂದಾಗಲೂ ಸುತ್ತಲಿನ ಬೆಟ್ಟದಿಂದ ನೀರು ಹರಿದು ಎಣ್ಣೆಹೊಂಡಕ್ಕೆ ಬರುತ್ತದೆ. ಹೊಂಡ ತುಂಬಿದ ಬಳಿಕ ರಸ್ತೆ ಹಾಗೂ ಚರಂಡಿಗಳ ಮೂಲಕ ಹರಿದು ಹೋಗುತ್ತದೆ. ಚರಂಡಿಗಳಲ್ಲಿ ತೆಂಗಿನಕಾಯಿ ಚಿಪ್ಪು, ಪ್ಲಾಸ್ಟಿಕ್ ಕಸ ತುಂಬಿದ್ದರಿಂದ ನೀರು ಹರಿದುಹೋಗದೇ, ದೇವಸ್ಥಾನದ ಪ್ರಾಂಗಣಕ್ಕೆ ನುಗ್ಗಿತು. ಪ್ರಾಂಗಣದಿಂದ ನೀರು ಹೊರಹೋಗಲು ಕಿಂಡಿಗಳನ್ನು ಮಾಡಲಾಗಿದೆ. ಭಕ್ತರು, ವ್ಯಾಪಾರಿಗಳಿಗೆ ತೊಂದರೆ ಆಗಿಲ್ಲ’ ಎಂದು ದೇವ ಸ್ಥಾನದ ಸೂಪರಿಂಟೆಂಡೆಂಟ್ ಅರವಿಂದ ಮಾಳಗೆ ಅವರುಪ್ರತಿಕ್ರಿಯೆ ನೀಡಿದರು.