ಬ್ಯಾಡಗಿ: ತಾಲ್ಲೂಕಿನ ಶಿಡೇನೂರು ಗ್ರಾಮದಲ್ಲಿ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆಯ ಹಿಂದೆ ಬ್ಯಾಡಗಿಯ ಕಾಂಗ್ರೆಸ್ ಮುಖಂಡ ಎಸ್.ಆರ್.ಪಾಟೀಲ ಅವರ ಕೈವಾಡವಿದೆ. ನಿನ್ನೆ ರೈತರನ್ನು ಕರೆಸಿಕೊಂಡು ಪ್ರಚೋದನೆ ನೀಡಿದ್ದಾರೆ ಎಂದು ಶಾಸಕ ನೆಹರು ಓಲೇಕಾರ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ‘ನಮ್ಮ ಕುಟುಂಬದವರು ಆಸ್ತಿ ಕೊಡಿ ಅಂತಾ ಯಾರನ್ನೂ ಕೇಳಿಲ್ಲ. ನನ್ನ ಜೊತೆಗೆ ಯಾರೂ ಚರ್ಚೆ ಮಾಡಿಲ್ಲ. ನಾನೇ ಶಿಡೇನೂರು ಗ್ರಾಮದ ಕೆಲವು ಕುಟುಂಬಗಳಿಗೆ ಹಿಂದೆ ಜಾಗ ನೀಡಿದ್ದೇನೆ. ನಾನು ಜಮೀನಿನ ಪಟ್ಟಾ ಕೊಟ್ಟಾಗ 18ರಿಂದ 19 ಕುಟುಂಬಗಳಿತ್ತು. ಈಗ ಅವರ ಸಂಖ್ಯೆ ಜಾಸ್ತಿಯಾಗಿದೆ’ ಎಂದು ಹೇಳಿದರು.
‘ಹಿಂದೆ ಕೊಟ್ಟಿದ್ದ ಜಾಗದ ಜತೆಗೆ ಹೆಚ್ಚುವರಿ ಜಾಗವನ್ನು ಒತ್ತುವರಿ ಮಾಡಿದ್ದಾರೆ. ಒತ್ತುವರಿ ಮಾಡಿದ ಭೂಮಿ ತೆರವುಗೊಳಿಸುವಂತೆ ಗ್ರಾಮಸ್ಥರು ಅವರಿಗೆ ಸೂಚಿಸಿದ್ದಾರೆ. ಸ್ಮಶಾನದ ಭೂಮಿಯ ಹಿಂದೆ ಇರುವ ಜಾಗವನ್ನು ಆ ಕುಟುಂಬಗಳಿಗೆ ನೀಡಲಾಗಿತ್ತು’ ಎಂದು ತಿಳಿಸಿದ್ದಾರೆ.