ಬಾಗಲಕೋಟೆ: ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ(KRDIL) ಅಧಿಕಾರಿಗಳು ನಿರ್ಮಿಸಿದ್ದ ಕಟ್ಟಡದ ಗೇಟ್ ಮೈಮೇಲೆ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಲಕ ರಂಜಿತ್ ಸೂರಗೊಂಡ(8) ಮೈ ಮೇಲೆ ಗೇಟ್ ಬಿದ್ದು ಮೃತಪಟ್ಟಿದ್ದಾನೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಸ್ತುತ ವೀಡಿಯೋ ವೈರಲ್ ಆಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಡೆದಿದ್ದೇನು?
ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಬಸವೇಶ್ವರ ಸಮುದಾಯ ಭವನದ ಮುಂದೆ ಗೇಟ್ ಅಳವಡಿಸಲಾಗಿತ್ತು. ಮೇ 31 ರಂದು ಅಲ್ಲೇ ಆಟವಾಡುತ್ತಿದ್ದ ರಂಜಿತ್ ಸೂರಗೊಂಡ ಮೈಮೇಲೆ ಗೇಟ್ ಬಿದ್ದು, ಸಾವನ್ನಪ್ಪಿದ್ದಾನೆ. ಆದರೆ ಸ್ಥಳೀಯರು ಚರಂಡಿಯಲ್ಲಿ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆಂದು ನಂಬಿದ್ದರು.
ಅವೈಜ್ಞಾನಿಕ ನಿರ್ಮಾಣ
ಬಸವೇಶ್ವರ ಸಮುದಾಯ ಭವನದ ಪಿ.ಕೆ.ಪಿ.ಎಸ್ ಸಂಸ್ಥೆಯ ಸಿಸಿಟಿವಿ ದೃಶ್ಯ ನೋಡಿದಾಗ ಅಸಲಿ ಘಟನೆ ಬೆಳಕಿಗೆ ಬಂದಿದೆ. ಕೆಆರ್‌ಡಿಐಎಲ್ ಅಧಿಕಾರಿಗಳಿಂದ ಕಟ್ಟಡ ನಿರ್ಮಿಸಲಾಗಿದ್ದು, ಅವೈಜ್ಞಾನಿಕವಾಗಿ ಗೇಟ್ ಅಳವಡಿಸಲಾದ ಪರಿಣಾಮ ಬಾಲಕನ ಮೇಲೆ ಗೇಟ್ ಬಿದ್ದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬಾಲಕನ ಸಾವಿನ ಸುದ್ದಿ ತಿಳಿದ ಬಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಾವಳಗಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.