ಬೆಳಗಾವಿ: ‘ತಮ್ಮ ಅಧಿಕಾರದ ಅವಧಿಯಲ್ಲಿ ಎಂದೂ ರೈತರ ಅಭಿವೃದ್ಧಿಗಾಗಿ ಶ್ರಮಿಸದ ಕಾಂಗ್ರೆಸ್, ಗೋಹತ್ಯೆ ಮಾಡುವವರಿಗೆ ಬೆಂಬಲ ನೀಡಿದೆ. ಹಾಗಾಗಿಯೇ ರೈತರ ಶಾಪ ತಟ್ಟಿದ್ದು, ಮುಂಬರುವ ದಿನಗಳಲ್ಲಿ ಆ ಪಕ್ಷ ಅಧಿಕಾರಕ್ಕೆ ಬಾರದು’ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರಿಗೆ ಅನುಕೂಲವಾಗಲಿ ಎಂದು ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರೂಪಿಸಿತ್ತು. ಕಾಂಗ್ರೆಸ್ ಇಲ್ಲಸಲ್ಲದ ಅಪಪ್ರಚಾರ ಮಾಡಿ ರೈತರ ದಿಕ್ಕು ತಪ್ಪಿಸಿತು. ಆದರೆ, ನಮ್ಮ ಸರ್ಕಾರ ರೈತರ ಪರವಾಗಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭ ರೈತರ ಕಲ್ಯಾಣಕ್ಕಾಗಿ ಹತ್ತಾರು ಯೋಜನೆ ಜಾರಿಗೊಳಿಸಿದೆ. ಆತ್ಮನಿರ್ಭರ ಕೃಷಿಗಾಗಿ ಕೆಲ ಮಹತ್ವದ ನಿರ್ಧಾರ ಕೈಗೊಂಡಿದೆ’ ಎಂದರು.
‘ಕಾಂಗ್ರೆಸ್ ನಾಯಕರು ಒಂದು ರಾಜಕೀಯ ಪಕ್ಷಕ್ಕೆ ಉತ್ತರ ನೀಡಲಾಗದ ಹೇಡಿಗಳು. ಅವರಿಗೇಕೆ ಆರ್‌ಎಸ್‍ಎಸ್ ಭೂತ ಹಿಡಿದಿದೆ ಎನ್ನುವುದು ಗೊತ್ತಿಲ್ಲ. ದೇಶಕ್ಕೆ ಸಂಕಷ್ಟ ಎದುರಾದಾಗಲೆಲ್ಲ ಆರ್‌ಎಸ್‌ಎಸ್ ಸ್ಪಂದಿಸಿದೆ. ಜನರ ರಕ್ಷಣೆ ಮಾಡಿದೆ. ಇದೇ ಕಾರಣಕ್ಕೆ, ಜನರೂ ಆ ಸಂಘಟನೆಯನ್ನು ಒಪ್ಪಿಕೊಂಡಿದ್ದಾರೆ. ನೈತಿಕವಾಗಿ ದಿವಾಳಿಯಾಗಿರುವ ಕಾಂಗ್ರೆಸ್‍ಗೆ ಆರ್‌ಎಸ್‍ಎಸ್ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ಆರ್‌ಎಸ್‍ಎಸ್ ನಪುಂಸಕ ಅಲ್ಲ. ಇಡೀ ದೇಶದ ಜನರೇ ಕಾಂಗ್ರೆಸ್ ಅನ್ನು ನಪುಂಸಕ ರೀತಿ ಮಾಡಿಟ್ಟಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.
‘ಆರ್‌ಎಸ್‌ಎಸ್‌ನವರ ಮೂಲ ಯಾವುದು?’ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಕಡಾಡಿ, ‘ಸಮಾಜವಾದಿ ಹೆಸರಿನಲ್ಲಿ ರಾಜಕೀಯ ರಂಗ ಪ್ರವೇಶಿಸಿದ ₹1 ಕೋಟಿ ಮೊತ್ತದ ವಾಚ್ ಕಟ್ಟಿಕೊಂಡು ಮಜಾವಾದಿ ಆಗಿದ್ದೀರಿ. ಕುಟುಂಬ ರಾಜಕಾರಣ ವಿರೋಧಿಸಿ ಜೆಡಿಎಸ್ ತೊರೆದ ನೀವು, ನಿಮ್ಮನ್ನು ಬೆಳೆಸಿದ ಪಕ್ಷಕ್ಕೇ ಕೈಕೊಟ್ಟಿದ್ದೀರಿ. ಅಷ್ಟಕ್ಕೆ ಸುಮ್ಮನಾಗದೆ, ಈಗ ಕಾಂಗ್ರೆಸ್‍ನಲ್ಲೂ ಬೆಂಕಿ ಹಚ್ಚುವ ಕೆಲಸ ಮುಂದುವರಿಸಿದ್ದೀರಿ. ಹಾಗಾದರೆ ನಿಮ್ಮ ಮೂಲ ಯಾವುದು ಹೇಳಿ’ ಎಂದು ಪ್ರಶ್ನಿಸಿದರು.