ದಕ್ಷಿಣ ಕಾಶಿ ಎಂದು ನಮ್ಮ ಬೆಳಗಾವಿಯ ಕಪಿಲೇಶ್ವರ ಮಂದಿರಕ್ಕೆ ಪ್ರತೀತಿ ಇದೆ. ಅಷ್ಟು ದೊಡ್ಡ ದೇವಾಲಯ ಒಂದು ಸಣ್ಣ ದೇವಾಲಯವಾಗಿ ಉಳಿಯಲು ಕಾರಣ ಏನು..? ಆ ದೇವಸ್ಥಾನ ಕೆಡವಿ ಏನು ಕಟ್ಟಿದರು ಎಂದು ಎಂಐಎಂ ಪಕ್ಷದ ಮುಖಂಡ ಲತೀಫ್‍ಖಾನ್ ಪಠಾಣ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಎಂಐಎಂ ಮುಖಂಡ ಲತೀಫ್‍ಖಾನ್ ಪಠಾಣ ಈಗಾಗಲೇ ಸಾಕಷ್ಟು ಬಾರಿ ನಾನು ಹೇಳಿದ್ದೇನೆ. 25-30 ವರ್ಷಕ್ಕಿಂತ ಮೊದಲು ಆರ್‍ಎಸ್‍ಎಸ್‍ನವರು ಇಡೀ ಭಾರತದಲ್ಲಿ ಈ ರೀತಿ ಸೂಕ್ಷ್ಮ ಪ್ರದೇಶಗಳ ಬಗ್ಗೆ ಬಹಳಷ್ಟು ಅಧ್ಯಯನ ಮಾಡಿದ್ದಾರೆ. ಯಾವ ಸಂದರ್ಭದಲ್ಲಿ ಯಾವ ವಿಷಯವನ್ನು ಮುನ್ನೆಲೆಗೆ ತರಬೇಕು. ಜನರ ದಾರಿ ತಪ್ಪಿಸಬೇಕು ಎಂಬುದು ಅವರ ಹಿಡನ್ ಅಜೆಂಡಾ ಆಗಿದೆ.
ಆ ಪ್ರಕಾರ ಮಾಡುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಔಷಧಿ, ಆಕ್ಸಿಜನ್ ಪೂರೈಕೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ದೇಶದಲ್ಲಿ ಸಾಕಷ್ಟು ನಿರುದ್ಯೋಗ ಸಮಸ್ಯೆಯಿದೆ. 2023-24 ಚುನಾವಣೆಯಲ್ಲಿ ಜನರಿಗೆ ಏನು ಹೇಳಬೇಕು ಎಂಬುದು ಅವರ ಬಳಿ ಇಲ್ಲ. ಹೀಗಾಗಿ ಜಾತಿ ಗದ್ದಲ ಎಬ್ಬಿಸಿದ್ರೆ ನಾವು ಇದರಿಂದ ಉಳಿದುಕೊಳ್ಳಬಹುದು ಎಂದು ತಿಳಿದುಕೊಂಡಿದ್ದಾರೆ ಎಂದು ಕಿಡಿಕಾರಿದರು.
91ರ ಕಾನೂನು ಪ್ರಕಾರ ಹಳೆಯ ಆರಾಧನಾ ಕಟ್ಟಡಗಳು ಯಥಾಸ್ಥಿತಿಯಲ್ಲಿ ಇರಬೇಕು ಎಂಬುದು ಕಾನೂನು ಇದೆ. ಆದರೆ ಇದೆಲ್ಲಾವೂ ಇದ್ದರೂ ಕೂಡ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಸರ್ವೋಚ್ಛ ನ್ಯಾಯಾಲಯ ಯಾವ ರೀತಿ ನಿರ್ಣಯ ಕೊಡುತ್ತೋ ಅದಕ್ಕೆ ನಾವು ಬದ್ಧ ಎಂದು ಹೇಳಿದ್ದೇವು. ಅದೇ ರೀತಿ ಅಯೋಧ್ಯೆ ತೀರ್ಪನ್ನು ಯಾವುದೇ ಗಲಭೆ ಇಲ್ಲದೇ ನಾವು ಒಪ್ಪಿಕೊಂಡಿದ್ದೇವೆ. ಇಷ್ಟಕ್ಕೆ ನಾವು ಸುಮ್ಮನಿದ್ದೇವೆ ಎಂದು ತಿಳಿದುಕೊಂಡು ಅದನ್ನೇ ಮುಂದುವರಿಸುತ್ತಿದ್ದಾರೆ.
ಈ ದೇಶವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ ಎನ್ನುವುದು ಸಂವಿಧಾನ ವಿರೋಧವೇ. ಇದು ಕೊರೊನಾಗಿಂತ ದೊಡ್ಡ ಭಯಾನಕ ರೋಗವಾಗಿದೆ. ಕೊರೊನಾ ರೋಗಕ್ಕೆ ಜಗತ್ತಿನ ಎಲ್ಲ ವೈದ್ಯರು ಬೆನ್ನು ಹತ್ತಿ ಔಷಧಿ ಕಂಡು ಹಿಡಿದರು. ಆದರೆ ಈ ರೋಗಕ್ಕೆ ಔಷಧಿ ಕಂಡು ಹಿಡಿಯುವವರು ಮಾನಸಿಕ ರೋಗಿಗಳಾಗಿದ್ದಾರೆ ಎಂದು ಎಂಐಎಂ ಪಕ್ಷದ ಮುಖಂಡ ಲತೀಫ್‍ಖಾನ್ ಪಠಾಣ ಆರೋಪಿಸಿದರು.