ಬೆಂಗಳೂರು: ರೈತ ಮುಖಂಡ ರಾಕೇಶ್ ಟಿಕಾಯತ್ (Rakesh Tikait) ಮತ್ತು ಯುದ್ಧ್ವೀರ್ ಸಿಂಗ್ ( Yudhvir Singh ) ಮೇಲೆ ಕಪ್ಪು ಮಸಿ ಎರಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸೋಮವಾರ ರಾಜ್ಯ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರೈತ ಮುಖಂಡರಾದ ರಾಕೇಶ್ ಟಿಕಾಯತ್ ಮತ್ತು ಯುದ್ಧ್ವೀರ್ ಸಿಂಗ್ ಮೇಲೆ ಕಪ್ಪು ಮಸಿ ಎರಚಲಾಗಿದೆ. ಕರ್ನಾಟಕದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ (Kodihalli Chandrashekar) ಮಾಡಿರುವ ಆರೋಪದ ಬಗ್ಗೆ ಸ್ಪಷ್ಟನೆ ನೀಡುತ್ತಿರುವಾಗ ಟಿಕಾಯತ್ ಮತ್ತು ಸಿಂಗ್ ಮುಖಕ್ಕೆ ಮಸಿ ಎರಚಲಾಗಿದೆ. ನಾವು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಕೋಡಿಹಳ್ಳಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಟಿಕಾಯತ್ ಮತ್ತು ಸಿಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಯುತ್ತಿದ್ದಂತೆ ಕೆಲವರು ವಾಗ್ವಾದಕ್ಕಿಳಿದು ಮಸಿ ಎರಚಿದ್ದಾರೆ. ನಂತರ ಅಲ್ಲಿದ್ದ ಕುರ್ಚಿಗಳನ್ನು ಎಳೆದು ಬಿಸಾಡಿದ್ದಾರೆ. ರೈತ ನಾಯಕ ಚಂದ್ರಶೇಖರ್ ಅವರ ಬೆಂಬಲಿಗರು ಈ ಕೃತ್ಯವೆಸಗಿದ್ದಾರೆ ಎಂದು ಟಿಕಾಯತ್ ಆರೋಪಿಸಿರುವುದಾಗಿ ‘ಟೈಮ್ಸ್ ನೌ’ ವರದಿ ಮಾಡಿದೆ.
ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರ ಮೇಲೆ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಚರ್ಚೆ ನಡೆಸಲು ನಗರದ ಗಾಂಧಿ ಭವನದಲ್ಲಿ ಕರೆದಿದ್ದ ಸಭೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ವ್ಯಕ್ತಿಯೊಬ್ಬ ರಾಕೇಶ್ ಟಿಕಾಯತ್ ಮೇಲೆ ಮೈಕ್ನಿಂದ ಹಲ್ಲೆ ನಡೆಸಿದ್ದು, ಮಸಿ ಬಳಿದಿದ್ದಾನೆ. ನಂತರ ಸಭೆಯಲ್ಲಿ ನೆರೆದಿದ್ದ ಇತರರು ಆತನನ್ನು ಹಿಡಿದು, ಕುರ್ಚಿಗಳಿಂದಲೇ ಥಳಿಸಿದರು. ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ, ಮಹಿಳೆಯರು ಭಯಗೊಂಡು ಕಿರುಚಿದರು.