ತೆಲಸಂಗ (ಬೆಳಗಾವಿ ಜಿಲ್ಲೆ): ಇಲ್ಲಿನ ಕೃಷಿ ಜಮೀನುಗಳಲ್ಲಿ ಕೂಲಿ ಮಾಡಿ ಜೀವನ ಸಾಗಿಸುವ ಕುಟುಂಬದ ಶಿಲ್ಪಾ ರಾಜು ಪರ್ನಾಕರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 614 ಅಂಕ ಪಡೆದು ಸಾಧನೆ ತೋರಿದ್ದಾರೆ.
ಓದು-ಬರಹ ಬಾರದ ತಂದೆ-ತಾಯಿಗೆ ಹೆಮ್ಮೆಯ ಭಾವ ನೀಡಿದ್ದಾರೆ.
ಪತ್ರಾಸಿನ ಮನೆ, ಮನೆಯ
ಅಂಗಳದಲ್ಲಿ ಜಾನವಾರು, ನಿತ್ಯ ಹೊಲದ ಕೆಲಸ ಮತ್ತು ಕೂಲಿ ಮಾಡಿಕೊಂಡೆ ಬದುಕಿನ ಬಂಡಿ ಜಗ್ಗುವ ಅವಿಭಕ್ತ ಕುಂಟುಂಬವಿದು. ಕೊರತೆಗಳ ನೆಪವನ್ನು ಬದಿಗಿಟ್ಟು ಸಾಧನೆ ತೋರಿದ್ದಾರೆ.
ಗ್ರಾಮದ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಉಳಿದುಕೊಂಡು ಓದಿ ಉತ್ತಮ ಶ್ರೇಣಿ ಪಡೆದಿದ್ದಾರೆ. ಕುಟುಂಬದವರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ. ಯಾವುದೇ ಕೋಚಿಂಗ್‌ಗೆ ಹೋಗದೆ ಶಿಲ್ಪಾ ಸಾಧನೆ ತೋರಿರುವುದು ವಿಶೇಷ.
‘ಸಮಸ್ಯೆಗಳತ್ತ ಹೆಚ್ಚು ಗಮನಕೊಡದೆ ಓದಿದೆ. ತಂದೆ, ತಾಯಿ, ಗುರುಗಳ ಸಹಕಾರದಿಂದ ಹೆಚ್ಚಿನ ಅಂಕ ಗಳಿಕೆ ಸಾಧ್ಯವಾಯಿತು’ ಎಂದು ಶಿಲ್ಪಾ ತಿಳಿಸಿದರು.