ರಾಯಚೂರು: ಶಾಸಕ ರಾಜೂಗೌಡ ಹೆಸರೇಳಿ ಜನರನ್ನು ವಂಚಿಸಿದ್ದ ನಯವಂಚಕಿ ರೇಖಾ ಎಂಬಾಕೆಯ ಬಂಧನವಾಗಿದೆ. ರೇಖಾ ವಂಚನೆಯ ಬಗ್ಗೆ ಇದೇ ಮೇ 10 ರಂದು ದಿಗ್ವಿಜಯ ನ್ಯೂಸ್ ವಿಸ್ತೃತ ವರದಿ ಬಿತ್ತರಿಸಿತ್ತು. ಇದರ ಪರಿಣಾಮವಾಗಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎನ್ಜಿಓ ಮೂಲಕ ಬ್ಯಾಂಕ್ ಓಪನ್ ಮಾಡಿ ಬ್ಯಾಂಕಿನಲ್ಲಿ ನೌಕರಿ ಕೊಡಿಸುವುದಾಗಿ ಜನರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ರೇಖಾ ಮೋಸ ಮಾಡಿದ್ದಾಳೆ. ತನ್ನ ಕೃತ್ಯಕ್ಕೆ ಶಾಸಕ ರಾಜೂಗೌಡ ಹೆಸರನ್ನು ಬಳಸಿಕೊಂಡಿದ್ದಳು. ಈ ಬಗ್ಗೆ ದಿಗ್ವಿಜಯ ವರದಿ ಮಾಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜೂಗೌಡ, ಸುರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದೀಗ ಸಕಲೇಶಪುರ ಮೂಲದ ರೇಖಾಳನ್ನು ಬಂಧಿಸಿ ಸುರಪುರ ಪೊಲೀಸರು ಕರೆತಂದಿದ್ದಾರೆ. ಬೆಂಗಳೂರಿನ ಕೆ.ಆರ್.ಪುರಂನಲ್ಲಿ ರೇಖಾ ವಾಸವಿದ್ದಳು. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಳು. ರೇಖಾಗೆ ಈರಪ್ಪಗೌಡ ಎಂಬುವವನು ಮಧ್ಯವರ್ತಿಯಾಗಿದ್ದ. ಈತ ಕೆ.ಆರ್.ಪುರಂನಲ್ಲಿ ಬೇಕರಿ ಇಟ್ಟುಕೊಂಡಿದ್ದ. ಈರಪ್ಪಗೌಡನ ಮೂಲಕ ರೇಖಾ ಹಣ ದೋಚುತ್ತಿದ್ದಳು. ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕ ಜಿಲ್ಲೆಯ ಹಲವರಿಗೆ ಮೋಸ ಮಾಡಿದ್ದಾರೆ.