ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನದಷ್ಟೇ ವಿಶ್ವ ಗುರು ಬಸವಣ್ಣವರ ವಚನಗಳು ಹರಿತವಾಗಿವೆ. ಆದಕಾರಣ ಬುದ್ದ, ಬಸವಣ್ಣ, ಡಾ. ಅಂಬೇಡ್ಕರ್ ಅವರ ಚಿಂತನೆಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.ತಾಲೂಕಿನ ಖಡಕಲಾಟ ಗ್ರಾಮದಲ್ಲಿ ಆಯೋಜಿಸಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯ ಸ್ವರ್ಣ ಮಹೋತ್ಸವ ಹಾಗೂ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ಯ್ರ ಸಿಕ್ಕು 60 ವರ್ಷಗಳ ಅವಧಿಯಲ್ಲಿ ಡಾ. ಅಂಬೇಡ್ಕರ್ ಅವರು ಬರೆದ ಸಂವಿಧಾನ ಮೇಲೆ ನಡೆಯದ ದಾಳಿ ಕಳೆದ 10 ವರ್ಷಗಳಲ್ಲಿ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಸ್ತುತ ಸಂವಿಧಾನ, ಶೋಷಿತರ, ಅಂಬೇಡ್ಕರ್ ಅವರ ವಿಚಾರಗಳ ಮೇಲೆ ಎಲ್ಲಾ ರೀತಿಯ ದಾಳಿ ನಡೆಯುತ್ತಿದ್ದು, ಅದು ಎಂತಹ ದಾಳಿ ಎಂದರೆ ಕಣ್ಣಿಗೆ ಕಾಣದ ದಾಳಿ. ಕೆಲವು ಕಾನೂನುಗಳನ್ನು ಬದಲಾವಣೆ ಮಾಡುವ ಮೂಲಕ ಎಸ್ಸಿ, ಎಸ್ಟಿ ಸಮುದಾಯಗಳ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಆದ್ದರಿಂದ ಸಮುದಾಯ, ಸಮುದಾಯದ ಮಕ್ಕಳನ್ನು ಜಾಗೃತಿಗೊಳಿಸುವುದು ಅಗತ್ಯವಿದೆ ಎಂದು ತಿಳಿಸಿದರು.ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಸ್ಸಿ, ಎಸ್ಟಿಗಳಿಗೆ ನೀಡಿದ ಯೋಜನೆಗಳನ್ನು ಬಿಜೆಪಿ ಸರ್ಕಾರ ಸ್ಥಗಿಗೊಳಿಸುತ್ತಿದ್ದು, ಇದನ್ನುಸೂಕ್ಷ್ಮವಾಗಿ ಗಮನಿಸಬೇಕು. ಡಾ. ಅಂಬೇಡ್ಕರ್ ವಿಚಾರಗಳು ಎಂದಿನವರೆಗೆ ಜೀವಂತವಾಗಿರುತ್ತವೆಯೋ ಅಂದಿನ ವರೆಗೆ ಮಾತ್ರ ನಾವು ಸ್ವಾಭಿಮಾನದಿಂದ ಬದುಕಲು ಸಾಧ್ಯವಿದೆ ಎಂದು ಹೇಳಿದರು.ನಮ್ಮ ರಾಜ್ಯದಲ್ಲಿ ಅಂಕಿ ಅಂಶಗಳ ಪ್ರಕಾರ ಸುಮಾರು 40 ಸಾವಿರ ದೇವದಾಸಿಯರು ಇದ್ದಾರೆ. ಈ ದೇವದಾಸಿ ಪದ್ದತಿಗೆ ಕೆಲವ ದಲಿತ ಹೆಣ್ಣು ಮಕ್ಕಳು ಏಕೆ ಬಲಿಯಾದರು ಎಂಬುವುದನ್ನು ಅಧ್ಯಯನ ಮಾಡಬೇಕು. ಅಷ್ಟೇ ಅಲ್ಲ ಈ ಅನಿಷ್ಟ ಪದ್ದತಿ ನಿವಾರಣೆಗೆ ಪ್ರತಿಯೊಬ್ಬರು ಪಣ ತೂಡಬೇಕು. ದೇವದಾಸಿ ಪದ್ದತಿ ತಡೆಗೆ ಕಾನೂನಿನಲ್ಲಿ ಅವಕಾಶಗಳಿದ್ದು, ಇಂತಹ ಅನಿಷ್ಟ ಪದ್ದತಿಗೆ ಹೆಣ್ಣು ಮಕ್ಕಳು ಬಲಿಯಾಗುವುದು ನಿಮ್ಮ ಗಮನಕ್ಕೆ ಬಂದರೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದರು