ಕಲಬುರಗಿ: ಪತಿಯನ್ನು ಪತ್ನಿಯೇ ಬಂಧಿಸಿ ಜೈಲಿಗೆ ಕಳುಹಿಸುವುದು, ಪತ್ನಿಯನ್ನು ಬಂಧಿಸಿ ಪತಿ ಜೈಲಿಗೆ ಕಳುಹಿಸುವುದು, ಮಗನೇ ಹೆತ್ತವರನ್ನು ಬಂಧಿಸೋದು, ಈ ರೀತಿಯ ಅನೇಕ ಘಟನೆಗಳು ಆಗಾಗ ಘಟಿಸುತ್ತಿರುತ್ತವೆ. ಇಲ್ಲಾ ಅಂತೇನೂ ಅಲ್ಲ. ಆದ್ರೆ ಇದೀಗ ಸ್ವತಃ ಪತ್ನಿಯೇ ಜೈಲರ್ ಆಗಿರುವ ಜೈಲಿಗೆ ಪತಿ ಮಹಾಶಯ ಹೋಗಿದ್ದಾನೆ. ಹಾಗಂತ ಅತಿಥಿಯಾಗಿ ಅಲ್ಲಾ, ಬದಲಾಗಿ ವಿಚಾರಣಾಧೀನ ಕೈದಿಯಾಗಿ! ಇಂತಹದೊಂದು ಘಟನೆಗೆ ಇದೀಗ ಕಲಬುರಗಿ ಕೇಂದ್ರ ಕಾರಾಗೃಹ ಸಾಕ್ಷಿಯಾಗಿದೆ.
ಹೌದು ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಪ್ರಕರಣದಲ್ಲಿ ಸಿಐಡಿ ಪೊಲೀಸರು ಏಳು ದಿನಗಳ ಹಿಂದೆ, ಕಲಬುರಗಿ ಕೆಎಸ್‌ಆರ್ ಪಿ ಅಸಿಸ್ಟೆಂಟ್ ಕಮಾಡೆಂಟ್ ವೈಜನಾಥ್ ರೇವೂರ್ ನನ್ನು ಬಂಧಿಸಿದ್ದರು. ಕಳೆದ ಏಳು ದಿನಗಳ ಕಾಲ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಇಷ್ಟು ದಿನಗಳ ಕಾಲ ಸಿಐಡಿ ಕಸ್ಟಡಿಯಲ್ಲಿದ್ದ ವೈಜನಾಥ್ ನನ್ನು ಸಿಐಡಿ ಅಧಿಕಾರಿಗಳು ಇಂದು ಸಂಜೆ ಕಲಬುರಗಿ ಮೂರನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯ ವೈಜನಾಥ್ ಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ. ಹೀಗಾಗಿ ಸಿಐಡಿ ಅಧಿಕಾರಿಗಳು ವೈಜನಾಥ್ ನನ್ನು ಕಲಬುರಗಿ ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಬಿಟ್ಟು ಬಂದಿದ್ದಾರೆ.