ಬೆಂಗಳೂರು,ಮೇ 13- ಸಚಿವ ಸಂಪುಟ ವಿಸ್ತರಣೆ, ವಿಧಾನಪರಿಷತ್ ಹಾಗೂ ರಾಜ್ಯಸಭೆ ಚುನಾವಣೆ , ಅಭ್ಯರ್ಥಿಗಳ ಆಯ್ಕೆ ಮತ್ತು ದೆಹಲಿ ಪ್ರವಾಸ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸಿದರು.
ಕಳೆದ ರಾತ್ರಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಜೊತೆ ಮಾತುಕತೆ ನಡೆಸಿದ ಬೆನ್ನಲ್ಲೇ ಇಂದು ಬೆಳಗ್ಗೆ ಕಾವೇರಿ ನಿವಾಸಕ್ಕೆ ಆಗಮಿಸಿದ ಬೊಮ್ಮಾಯಿ ಅವರು, ಬಿಎಸ್‍ವೈ ಜೊತೆ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ರಹಸ್ಯವಾಗಿ ಚರ್ಚೆ ನಡೆಸಿದ್ದಾರೆ.
ಎರಡು ದಿನಗಳ ಹಿಂದಷ್ಟೇ ದೆಹಲಿಗೆ ತೆರಳಿದ್ದ ಬೊಮ್ಮಾಯಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆ/ಪುನಾರಚನೆ ಕುರಿತಾಗಿ ಮಾತುಕತೆ ನಡೆಸಿದ್ದರು. ಮೂರ್ನಾಲ್ಕು ದಿನಗಳಲ್ಲಿ ದೆಹಲಿಯಿಂದ ಸಂದೇಶ ಬರುತ್ತದೆ ಎಂದು ಸ್ವತಃ ಬೊಮ್ಮಾಯಿ ಅವರೇ ಹೇಳಿದ್ದರು. ಇದೀಗ ಬಿಎಸ್‍ವೈ ಅವರ ಬಳಿ ಸಂಪುಟದಿಂದ ಕೈಬಿಡುವವರು ಹಾಗೂ ತೆಗೆದುಕೊಳ್ಳುವವರ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸಂಪುಟದಲ್ಲಿ ಸದ್ಯ 5 ಸ್ಥಾನಗಳು ಖಾಲಿಯಿದ್ದು, ಚುನಾವಣಾ ವರ್ಷ ಆಗಿರುವುದರಿಂದ ಪುನಾರಚನೆ ಮಾಡಬೇಕೆಂಬ ಬೇಡಿಕೆಯನ್ನು ವರಿಷ್ಠರ ಮುಂದೆ ಬೊಮ್ಮಾಯಿ ಇಟ್ಟಿದ್ದಾರೆ. ಯಾವುದೇ ವೇಳೆ ಗ್ರೀನ್ ಸಿಗ್ನಲ್ ಸಿಗಬಹುದೆಂಬ ನಿರೀಕ್ಷೆಯ ಹಿನ್ನೆಲೆಯಲ್ಲಿ ಪಕ್ಷದ ಪ್ರಮುಖರು ಆಗಿರುವ ಯಡಿಯೂರಪ್ಪ ಅವರ ಬಳಿ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿದ್ದಾರೆ.