ಬೆಂಗಳೂರು,ಮೇ 9- ಇನ್ನೇನು ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಉಳಿದಿದೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ಸದ್ದು ಮಾಡಲು ಶುರುಮಾಡಿದೆ.
ಹಲವು ನಾಯಕರ ಬಿಜೆಪಿ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ್ದ ಕಂದಾಯ ಸಚಿವ ಆರ್. ಅಶೋಕ್, ಇದು ಮೊದಲನೇ ಪಟ್ಟಿ, ಇನ್ನು ಮತ್ತೊಂದು ಹಂತದಲ್ಲಿ ಮತ್ತೆ ಸೇರ್ಪಡೆ ಕಾರ್ಯಕ್ರಮವಿದೆ ಎಂಬ ಸುಳಿವು ನೀಡಿದ್ದಾರೆ. ಸಹಜವಾಗಿ ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಸದ್ಯ ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲವು ಸಾಧಿಸುವ ನಿಟ್ಟಿನಲ್ಲಿ ಬಿಜೆಪಿ ತಂತ್ರ ರೂಪಿಸುತ್ತಿದೆ. ಪಕ್ಷದ ಹಿಡಿತ ದೊಡ್ಡ ಮಟ್ಟದಲ್ಲಿ ಇಲ್ಲದ ಈ ಭಾಗದಲ್ಲಿ ಆಪರೇಷನ್ ಮೂಲಕ ಇತರ ಪಕ್ಷದ ಮುಖಂಡರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಸಚಿವ ಡಾ.ನಾರಾಯಣಗೌಡ ಈ ಬಗ್ಗೆ ಸುಳಿವು ನೀಡಿದ್ದಾರೆ. ಓರ್ವ ಸಂಸದರೂ ಬಿಜೆಪಿಗೂ ಸೇರ್ಪಡೆಯಾಗುತ್ತಾರೆ ಎಂಬ ಸುಳಿವು ನೀಡಿದ್ದಾರೆ.
ಮೂಲಗಳ ಮಾಹಿತಿ ಪ್ರಕಾರ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. ಅವರು ಪಕ್ಷಕ್ಕೆ ಸೇರ್ಪಡೆಗೊಂಡರೆ ಅವರ ಪುತ್ರನಿಗೆ ಮುಂದಿನ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಯಾವುದಾದರೊಂದು ಕ್ಷೇತ್ರದಲ್ಲಿ ಟಿಕೆಟ್ ನೀಡುವ ಸಾಧ್ಯತೆಯೂ ಇದೆ.
ರಾಜ್ಯದಲ್ಲಿ ಆಪರೇಷನ್ ಮೂಲಕ ಪಕ್ಷಾಂತರ ಪ್ರಯತ್ನಕ್ಕೆ ಮೂರು ಪಕ್ಷಗಳು ಕೈ ಹಾಕಿವೆ. ಸದ್ಯ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಮುಖಂಡರು ಇತರ ಪಕ್ಷಗಳ ಕಡೆಗೆ ವಲಸೆ ಹೋಗದಂತೆ ತಡೆಯುವುದು ಬಹುದೊಡ್ಡ ಸವಾಲಾಗಿದೆ.
ಈ ನಿಟ್ಟಿನಲ್ಲಿ ಕೌಂಟರ್ ತಂತ್ರಗಾರಿಕೆಗಳನ್ನು ಮೂರು ಪಕ್ಷಗಳು ಹೆಣೆಯುತ್ತಿವೆ.