ಬೆಳಗಾವಿ: ಕೋವಿಡ್-19ನಿಂದ ಸಂಭವಿಸಿರುವ ಸಾವಿನ ಸಂಖ್ಯೆಯ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಸುಳ್ಳು ಹೇಳುತ್ತಾರೆ ಎಂದರೆ ಏನನ್ನಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ದೇಶದಲ್ಲಿ ಕೋವಿಡ್-19ರಿಂದ ಮೃತಪಟ್ಟವರ ನಿಖರ ಸಂಖ್ಯೆಯನ್ನು ಬಹಿರಂಗಪಡಿಸುವುದಕ್ಕಾಗಿ ಮರಣ ಆಡಿಟ್ ನಡೆಸಬೇಕು’ ಎಂದು ಆಗ್ರಹಿಸಿದರು.
‘ಕೋವಿಡ್ ಸಾವಿನ ವಿಷಯದಲ್ಲಿ ಸುಳ್ಳು ಲೆಕ್ಕ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಂಬಂಧಿಸಿದವರು ಜನರ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದರು.
‘2020ರ ಜನವರಿಯಿಂದ ಡಿಸೆಂಬರ್‌ವರೆಗೆ ದೇಶದಲ್ಲಿ 47 ಲಕ್ಷ ಜನರು ಕೋವಿಡ್ ಕಾರಣದಿಂದ ಬಲಿಯಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ. ಇದು ಯಾವುದೋ ರಾಜಕೀಯ ಪಕ್ಷ ಕೊಟ್ಟಿರುವ ಮಾಹಿತಿಯಲ್ಲ. ಆದರೆ ಸರ್ಕಾರ ಅದನ್ನು ನಿರಾಕರಿಸಿದೆ. 5.20 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ ಅಂತಷ್ಟೆ ಹೇಳಿದೆ. ಡಬ್ಲ್ಯುಎಚ್‌ಒ ಹೇಳಿದ್ದು ಸುಳ್ಳು ಹೇಗಾಗುತ್ತದೆ?’ ಎಂದು ಕೇಳಿದರು.
‘ಕೋವಿಡ್‌ನಿಂದ ರಾಜ್ಯದಲ್ಲಿ 5 ಲಕ್ಷ ಹಾಗೂ ದೇಶದಲ್ಲಿ 50 ಲಕ್ಷ ಜನರು ಸತ್ತಿದ್ದಾರೆ. ಆದರೆ ಸರ್ಕಾರ ಸುಳ್ಳು ಹೇಳುತ್ತಿದೆ. ಸಿಎಂ, ಪ್ರಧಾನಿಯಿಂದ ಹಿಡಿದು ಸರ್ಕಾರದ ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ. ಸರ್ಕಾರ ಸತ್ತವರ ಲೆಕ್ಕವನ್ನೆ ಮಾಡಿಲ್ಲ. ಪ್ರಧಾನಿಯೇ ಸುಳ್ಳು ಹೇಳುತ್ತಾರೆ ಎಂದರೆ ಏನನ್ನಬೇಕು?’ ಎಂದು ವಾಗ್ದಾಳಿ ನಡೆಸಿದರು.