ಬೆಳಗಾವಿ: ಘಟಪ್ರಭಾ ಮೇಲ್ದಂಡೆ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಜಿಲ್ಲೆಯ ಗೋಕಾಕ ಹಾಗೂ ಮೂಡಲಗಿ ತಾಲ್ಲೂಕುಗಳ ರೈತರು ಇಲ್ಲಿನ ಕ್ಲಬ್ ರಸ್ತೆಯಲ್ಲಿರುವ ನೀರಾವರಿ ನಿಗಮದ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿ, ಬಳಿಕ ಪ್ರಾದೇಶಿಕ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿದರು.
ಬೇಸಿಗೆ ಹಿನ್ನೆಲೆಯಲ್ಲಿ ಜನ-ಜಾನುವಾರಿಗೆ ನೀರಿನ ಅವಶ್ಯಕತೆ ಇದೆ. ನೀರಿಲ್ಲದೆ ಬಹಳಷ್ಟು ತೊಂದರೆ ಅನುಭವಿಸುತ್ತಿದ್ಧೇವೆ. ಪ್ರತಿ ನಿತ್ಯ 2ಸಾವಿರ ಕ್ಯುಸೆಕ್ ನೀರನ್ನು ಕಾಲುವೆಗೆ ಹರಿಸಬೇಕು’ ಎಂದು ಒತ್ತಾಯಿಸಿದರು.
‘ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಬೇಸಿಗೆ ಕಾಲದಲ್ಲಿ ನಿತ್ಯ 2ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಪ್ರಾದೇಶಿಕ ಆಯುಕ್ತರು ಹಾಗೂ ನಿಗಮದ ಮುಖ್ಯ ಎಂಜಿನಿಯರ್‌ಗೆ ಮೊಬೈಲ್ ಫೋನ್ ಮೂಲಕ ತಿಳಿಸಿದ್ದೇನೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಆದರೆ, ಅಧಿಕಾರಿಗಳು ನೀರು ಬಿಡದೆ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಜಲಾಶಯದಲ್ಲಿ ನೀರು ಸಂಗ್ರಹವಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ; ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದರು.