ಕೋಲ್ಕತಾ: ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿಯವರು ನೇಪಾಳದ ಪಾರ್ಟಿಯೊಂದರಲ್ಲಿ ಮದ್ಯಹೀರುತ್ತಿರುವ ಯುವತಿಯ ಪಕ್ಕ ಕಾಣಿಸಿಕೊಂಡಿರುವ ವಿಡಿಯೋ ಭಾರಿ ಕೋಲಾಹಲ ಸೃಷ್ಟಿಸಿರುವುದು ಕಾಂಗ್ರೆಸ್ಸಿಗರಿಗೆ ಭಾರಿ ಕೋಪ ತರಿಸಿದೆ. ಸ್ನೇಹಿತೆಯೊಬ್ಬರ ಮದುವೆಗೆ ರಾಹುಲ್ ಗಾಂಧಿ ಹೋಗಿದ್ದೇ ವಿನಾ ಅಲ್ಲಿ ನೈಟ್‌ಕ್ಲಬ್‌ನಲ್ಲಿ ಮೋಜುಮಸ್ತಿ ಮಾಡಲು ಅಲ್ಲ ಎಂದು ಕಾಂಗ್ರೆಸ್ ಹೇಳುತ್ತಾ ಬಂದಿದ್ದರೂ, ಈ ವಿಡಿಯೋ ಜಾಲತಾಣದಲ್ಲಿ ವಿಧವಿಧ ಕಮೆಂಟ್‌ಗಳ ಜತೆ ಹರಿದಾಡುತ್ತಿದೆ.
ಬಿಜೆಪಿಯ ಕಾರ್ಯಕರ್ತರು ಕೂಡ ಈ ವಿಡಿಯೋ ಬಗ್ಗೆ ತಮಾಷೆ ಮಾಡುತ್ತಿರುವುದು ಕಾಂಗ್ರೆಸ್ ಇನ್ನಷ್ಟು ಕಿಡಿ ಕಾರುವಂತಾಗಿದೆ. ಈ ಕುರಿತು ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕೋಲ್ಕತಾದಲ್ಲಿ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ವಿಮಾನದಲ್ಲಿ ಈಜುಕೊಳವಿದೆ. 13 ಸಾವಿರ ಕೋಟಿ ರೂಪಾಯಿ ಮೌಲ್ಯದ ಈಜುಕೊಳಗಳನ್ನು ಹೊಂದಿರುವ ಎರಡು ವಿಮಾನಗಳನ್ನು ಮೋದಿ ಖರೀದಿಸಿದ್ದಾರೆ. ಅವರು ವಿದೇಶಕ್ಕೆ ಹೋಗುವಾಗ ವಿಮಾನದಲ್ಲಿಯೂ ಈಜುತ್ತಾ ಹೋಗುತ್ತಾರೆ. ಆದರೆ ರಾಹುಲ್ ಗಾಂಧಿ ನಿಮ್ ಮೋದಿಯ ಹಾಗಲ್ಲ, ಅವರು ಹೋಗಿದ್ದು ಸ್ನೇಹಿತೆಯ ಮದುವೆಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೇಪಾಳವು ನೆರೆಯ ದೇಶ. ಯಾರು ಬೇಕಾದರೂ ಅಲ್ಲಿಗೆ ಹೋಗಬಹುದು. ರಾಹುಲ್ ಗಾಂಧಿಯವರು ತಮ್ಮ ಸ್ವಂತ ಜೇಬಿನಿಂದ ಹಣವನ್ನು ಖರ್ಚು ಮಾಡಿದ್ದಾರೆ. ಪ್ರಧಾನಿ ಮೋದಿಯ ಹಾಗೆ ಬೇರೆ ಹಣದಲ್ಲಿ ವಿಮಾನದಲ್ಲಿ ಈಜುತ್ತಾ ಹೋಗಲಿಲ್ಲ ಎಂದಿದ್ದಾರೆ.