ಬೆಂಗಳೂರು: ಪಿಎಸ್ ಐ ವರ್ಗಾವಣೆ ಆರೋಪಿಗಳು ಸಚಿವ ಅಶ್ವತ್ಥನಾರಾಯಣ ಅವರ ನೆಂಟರು. ಈ ಸರಕಾರ ಸಾಮಾನ್ಯ ಜನಪೀಡಕ ಸರಕಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಆರೋಪಿಗಳಾದ ದರ್ಶನ ಗೌಡ ಹಾಗೂ ನಾಗೇಶ್ ಗೌಡ ಸಚಿವ ಅಶ್ವತ್ಥನಾರಾಯಣ ಅವರ ನೆಂಟರು.
ಈ ಕಾರಣಕ್ಕಾಗಿ ಅವರನ್ನು ಬಿಟ್ಟುಕಳಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯ ಸಹಾಯಕ ಪ್ರಾಧ್ಯಾಪಕರ ನೇಮಕದಲ್ಲೂ ಅಕ್ರಮ ನಡೆದಿದ್ದು, ಅಶ್ವತ್ಥನಾರಾಯಣ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ತಕ್ಷಣ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿದರು.
ರಾಜ್ಯದಲ್ಲಿರುವುದು 40% ಸರಕಾರ. ಜನಪೀಡಕ ಸರಕಾರ. ಆದರೆ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬೊಮ್ಮಾಯಿ ಸರಕಾರಕ್ಕೆ ಬೆನ್ನು ತಟ್ಟಿ ಹೋಗಿದ್ದಾರೆ. ಇದರರ್ಥ ಕೇಂದ್ರ ಸರಕಾರ ಈ ಭ್ರಷ್ಟಾಚಾರವನ್ನು ಸಮರ್ಥನೆ ಮಾಡಿದಂತಲ್ಲವೇ ? ಪ್ರಧಾನಿ ನರೇಂದ್ರ ಮೋದಿಯವರು ಕಮಿಷನ್ ಆರೋಪಕ್ಕೆ ಸಂಬಂಧಪಟ್ಡಂತೆ ಮೌನಕ್ಕೆ ಶರಣಾಗಿರುವುದರ ಅರ್ಥವೇನು? ಜನರ ಕಣ್ಣಿಗೆ ಮಣ್ಣೆರೆಚುವುದನ್ನು ಇನ್ನಾದರೂ ಬಿಡಿ ಎಂದು ಆರೋಪಿಸಿದರು.