ಕಾಸರಗೋಡು: ಚಿಕನ್ ಶೋರ್ಮಾ ತಿಂದ ಬಳಿಕ ಫುಡ್ ಪಾಯಿಸನ್ ಆಗಿ 16 ವರ್ಷದ ವಿದ್ಯಾರ್ಥಿನಿ ಮೃತಪಟ್ಟಿರುವ ಆಘಾತಕಾರಿ ಘಟನೆ ಕೇರಳದ ಚೆರ್ವತ್ತೂರಿನಲ್ಲಿ ನಡೆದಿದೆ. ಇದಲ್ಲದೆ, 14 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ವಿದ್ಯಾರ್ಥಿನಿಯನ್ನು ಕರಿವೆಳ್ಳೂರು ಪೆರಳಂ ನಿವಾಸಿ ದೇವಾನಂದಾ (16) ಎಂದು ಗುರುತಿಸಲಾಗಿದೆ. ಚೆರ್ವತ್ತೂರಿನ ಐಡಿಯಲ್ ಫುಡ್ ಪಾಯಿಂಟ್ನಲ್ಲಿ ವಿದ್ಯಾರ್ಥಿಗಳು ಶನಿವಾರ ಶೋರ್ಮಾ ಸೇವಿಸಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ವಿದ್ಯಾರ್ಥಿಗಳಲ್ಲಿ ವಾಂತಿ, ಭೇದಿ, ಹೊಟ್ಟೆನೋವು ಹಾಗೂ ಜ್ವರ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇತ್ತ ತೀವ್ರ ಅಸ್ವಸ್ಥಳಾಗಿದ್ದ ದೇವಾನಂದಾಳನ್ನು ಭಾನುವಾರ ಬೆಳಗ್ಗೆ ಚೆರ್ವತ್ತೂರಿನ ಆರೋಗ್ಯ ಕೇಂದ್ರಕ್ಕೆ ತರಲಾಗಿತ್ತು. ಆದರೆ, ಆರೋಗ್ಯ ಸುಧಾರಿಸದೇ ಹದಗೆಟ್ಟ ಕಾರಣ ಹೆಚ್ಚಿನ ಚಿಕಿತ್ಸೆಗೆಂದು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ, ಚಿಕಿತ್ಸೆ ಫಲಿಸದೇ ದೇವಾನಂದಾ ಕೊನೆಯುಸಿರೆಳೆದಿದ್ದಾಳೆ. ಉಳಿದ 14 ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ. ಫುಡ್ ಪಾಯಿಸನ್ನಿಂದ ಮೃತಪಟ್ಟಿರುವುದು ಮರಣೋತ್ತರ ವರದಿಯಿಂದ ದೃಢವಾಗಿದೆ.