ಬೆಂಗಳೂರು, ಮೇ. 03: ಪಿಎಸ್‌ಐ ಪರೀಕ್ಷೆಯನ್ನು ರದ್ದು ಗೊಳಿಸಿದ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಪಿಎಸ್‌ಐ ಅಭ್ಯರ್ಥಿಗಳು ಹೋರಾಟವನ್ನು ಕೈ ಬಿಟ್ಟಿದ್ದಾರೆ. ಸರ್ಕಾರದ ಮರು ಪರೀಕ್ಷೆ ನಿರ್ಧಾರದ ವಿರುದ್ದ ಕಾನೂನು ಸಮರ ಸಾರಲು ನಿರ್ದಾರ ಕೈಗೊಂಡಿದ್ದು, ಮಂಗಳವಾರ ಹೋರಾಟವನ್ನು ಅಂತ್ಯಗೊಳಿಸಿದರು.
ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಸರ್ಕಾರ ರದ್ದುಗೊಳಿಸಿತ್ತು. ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದ ಅಭ್ಯರ್ಥಿಗಳು ಸರ್ಕಾರದ ನಿರ್ಣಯ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಪಿಎಸ್‌ಐ ನೇಮಕಾತಿ ಆದೇಶ ಕೊಡಿ ಇಲ್ಲವೇ ವಿಷ ಕೊಡಿ ಎಂಬ ನಾಮ ಫಲಕ ಪ್ರದರ್ಶಿಸಿ ತಮ್ಮ ನೋವು ತೋಡಿಕೊಂಡಿದ್ದರು.
ಪ್ರತಿಭಟನೆಗೆ ಸರ್ಕಾರ ಮಣಿಯುವ ಯಾವ ಲಕ್ಷಣವೂ ಗೋಚರಿಸದ ಬೆನ್ನಲ್ಲೇ ಇದೀಗ ಕಾನೂನು ಸಮರ ಸಾರಲು ತಯಾರಿ ನಡೆಸಿದ್ದಾರೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದೇವೆ. ಯಾರೋ ಅಕ್ರಮ ಮಾಡಿದರೆ ನಾವು ಏನು ತಪ್ಪು ಮಾಡಿದ್ದೇವೆ. ಮತ್ತೆ ಪರೀಕ್ಷೆ ಮಾಡುವುದರಿಂದ ನಮಗೆ ಅನ್ಯಾಯವಾಗಲಿದೆ. ಹೀಗಾಗಿ ತಪ್ಪಿತಸ್ಥರನ್ನು ಬಂಧಿಸಲಿ, ನಮಗೆ ಪಿಎಸ್‌ಐ ನೇಮಕಾತಿ ಆದೇಶ ಕೊಡಿ ಎಂದು ಆಗ್ರಹಿಸಿದ್ದರು.
ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ತೊಂದರೆ ಮಾಡುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿತ್ತು. ಇದೀಗ ನೇಮಕಾತಿ ಅಕ್ರಮ ನೆಪ ಇಟ್ಟುಕೊಂಡು ಪ್ರಾಮಾಣಿಕ ಅಭ್ಯರ್ಥಿಗಳಿಗೆ ಮೋಸ ಮಾಡಿದೆ ಎಂದು ಅಭ್ಯರ್ಥಿಗಳು ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು. ಇದರ ಬೆನ್ನಲ್ಲೇ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದ್ದರು.