ಪುಣೆ: ಮೊಮ್ಮಗಳ ಜನನದಿಂದ ಹರ್ಷಗೊಂಡ ಪುಣೆ ಜಿಲ್ಲೆಯ ರೈತರೊಬ್ಬರು ಮಂಗಳವಾರ ಆಕೆಯನ್ನು ಮನೆಗೆ ಕರೆತರಲು ಹೆಲಿಕಾಪ್ಟರ್ ಅನ್ನೇ ಬಳಸಿದ್ದಾರೆ.
ಪುಣೆಯ ಹೊರವಲಯದಲ್ಲಿರುವ ಬಾಲೆವಾಡಿ ಪ್ರದೇಶದ ನಿವಾಸಿ ಅಜಿತ್ ಪಾಂಡುರಂಗ ಬಲ್ವಾಡ್ಕರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕುಟುಂಬದ ಹೊಸ ಸದಸ್ಯೆ ಕ್ರುಶಿಕಾಗೆ ಭವ್ಯವಾದ ಸ್ವಾಗತವನ್ನು ನೀಡಲು ಹೆಲಿಕಾಪ್ಟರ್ ಅನ್ನು ಕರೆಸಿದ್ದೇನೆ.
ಮೊಮ್ಮಗಳ ಆಗಮನದಿಂದ ಸಂತೋಷವಾಗಿದೆ. ಆದ ಕಾರಣ ಅವಳನ್ನು ಬರಮಾಡಿಕೊಳ್ಳಲು ಈ ವ್ಯವಸ್ಥೆ ಮಾಡಿದ್ದೇನೆ ಎಂದು ಹೇಳಿದರು.
ನಮ್ಮ ಇಡೀ ಕುಟುಂಬದಲ್ಲಿ ಇತ್ತೀಚೆಗೆ ಹೆಣ್ಣುಮಗು ಹುಟ್ಟಿರಲಿಲ್ಲ. ಅದರಿಂದಾಗಿ ಈ ಕ್ಷಣವನ್ನು ವಿಶೇಷವಾಗಿಸಲು 1 ಲಕ್ಷ ರೂ. ಖರ್ಚು ಮಾಡಿ ಸಮೀಪದ ಶೆವಾಲ್ ವಾಡಿಯಲ್ಲಿರುವ ಅಜ್ಜಿ ಮನೆಯಿಂದ ಮಗು ಮತ್ತು ತಾಯಿಯನ್ನು ಮನೆಗೆ ಕರೆತರುವುದಕ್ಕೆ ಚಾಪರ್ ಅನ್ನು ಬುಕ್ ಮಾಡಿರುವುದಾಗಿ ಹೇಳಿದರು.