ವಿಜಯವಾಡ: ಇಷ್ಟವಿಲ್ಲದ ಮದುವೆಯಿಂದ ತಪ್ಪಿಸಿಕೊಳ್ಳಲು ಸರ್ಪ್ರೈಸ್ ಗಿಫ್ಟ್ ಕೊಡುವುದಾಗಿ ಕರೆದು ಭಾವಿ ಪತಿಯ ಕತ್ತು ಕೊಯ್ದಿದ್ದ ಯುವತಿಯೊಬ್ಬಳನ್ನು ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆರೋಪಿ ಯುವತಿ ತಪ್ಪೊಪ್ಪಿಕೊಂಡಿದ್ದಾಳೆ.
ಆಂಧ್ರದ ಅನಕಪಲ್ಲಿ ಜಿಲ್ಲೆಯ ರವಿಕಾಮತಮ್ ಮಂಡಲದ ಕೋಮಲಪುಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜಿಲ್ಲೆಯಾದ್ಯಂತ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಆರೋಪಿಯ ಹೆಸರು ಪುಷ್ಪಾ. ಮದುವೆ ಇಷ್ಟವಿಲ್ಲದಿದ್ದಕ್ಕೆ ಈ ಕೃತ್ಯ ಎಸಗಿದೆ ಎಂದು ಪುಷ್ಪಾ ತಪ್ಪೊಪ್ಪಿಕೊಂಡಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಬಂಧನ ಮಾಡಿ ವಿಶಾಖಪಟ್ಟಣಂ ಜೈಲಿಗೆ ಸ್ಥಳಾಂತರ ಮಾಡಿದ್ದಾರೆ.
ಅನಕಪಲ್ಲಿ ಜಿಲ್ಲೆಯ ಮಡುಗುಲ ಮಂಡಲ್ ಘಾಟ್ ನಿವಾಸಿ ಅಡ್ಡೆಪಲ್ಲಿ ರಾಮು ನಾಯ್ಡು ಹೈದರಾಬಾದ್ನ ಸಿಎಸ್ಐಆರ್ನಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮದುವೆ ಪುಷ್ಪಾ ಜತೆ ಮೇ 26ರಂದು ನಡೆಯಬೇಕಿತ್ತು. ಎರಡೂ ಮನೆಯವರು ಮದುವೆಗೆ ಬೇಕಾದ ತಯಾರಿಯನ್ನು ನಡೆಸುತ್ತಿದ್ದರು. ಮದುವೆ ಆಮಂತ್ರಣ ಪತ್ರಿಕೆಯನ್ನು ಹಂಚಿಕೆ ಮಾಡಲಾಗಿತ್ತು. ಇತ್ತ ಪುಷ್ಪಾ ಕೂಡ ರಾಮ ನಾಯ್ಡು ಜತೆ ಆಗಾಗ ಫೋನ್ನಲ್ಲಿ ಬಿಜಿಯಾಗಿರುತ್ತಿದ್ದಳು.
ಹೀಗಿರುವಾಗ ಭಾವಿ ಪತಿಯನ್ನು ಕರೆದಿದ್ದ ಪುಷ್ಪಾ ತನ್ನ ಫ್ರೆಂಡ್ಸ್ಗಳಿಗೆ ಪರಿಚಯ ಮಾಡಿಕೊಡಲು ಜತೆಗೆ ಕರೆದೊಯ್ಯವುದಾಗಿ ಹೇಳಿದ್ದರು. ಜತೆಗೆ ಕರೆದೊಯ್ದಿದ್ದ ಪುಷ್ಪಾ ಮಾರ್ಗ ಮಧ್ಯದಲ್ಲಿ ಫ್ಯಾನ್ಸಿ ಶಾಪ್ನಲ್ಲಿ ಗಿಫ್ಟ್ ಆಗಿ ಸ್ಟೈಲಿಶ್ ಚಾಕು ಕೊಂಡು ತಂದಿದ್ದಳು. ಬಳಿಕ ಇಬ್ಬರು ಕೊಮಲಪುಡಿಯಲ್ಲಿರುವ ಅಮರಪುರಿ ಆಶ್ರಮ ಕಡೆಗೆ ಭಾವಿ ಪತಿಯನ್ನು ಕರೆದೊಯ್ದಳು. ಇದಾದ ಬಳಿಕ ಸರ್ಪ್ರೈಸ್ ಗಿಫ್ಟ್ ಕೊಡುವುದಾಗಿ ಹೇಳಿ ದುಪ್ಪಟ್ಟದಿಂದ ಭಾವಿ ಪತಿಯ ಕಣ್ಣು ಮುಚ್ಚಿದ್ದಾಳೆ. ತಕ್ಷಣ ಆತನ ಕತ್ತನ್ನು ಚಾಕುವಿನಿಂದ ಕೊಯ್ದಿದ್ದಾಳೆ.