ಹಾಸನ: ‘ರಾಜ್ಯದಲ್ಲಿ ಬಿಜೆಪಿ- ಕಾಂಗ್ರೆಸ್ ಎಷ್ಟೇ ಕುಣಿದಾಡಿದರೂ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತೊಲಗಬೇಕು. ಸರ್ವಧರ್ಮ ಸಮನ್ವಯ ಉಳಿಯಬೇಕು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.
ಜೆಡಿಎಸ್ ಜಲಧಾರೆ ಸಮಾವೇಶದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಜೆಡಿಎಸ್ ಸಂಘಟನೆ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಗೊತ್ತಿದೆ.
ಶಿವಲಿಂಗೇಗೌಡ, ರಾಮಸ್ವಾಮಿ ಸೇರಿದಂತೆ ಯಾರೂ, ಎಲ್ಲೂ ಹೋಗಲ್ಲ. ಉತ್ತರ
ಕರ್ನಾಟಕ ಹಲವರು ಪಕ್ಷಕ್ಕೆ ಬರುತ್ತಾರೆ. ಮುಂದೆ ಹೊಸ ಸಿನಿಮಾ ತೋರಿಸುವೆ, ಅಲ್ಲಿಯವರೆಗೂ ಕಾಯಿರಿ’ ಎಂದು ತಿಳಿಸಿದರು.
‘ರಾಜ್ಯದಲ್ಲೇ ಹಾಸನ ಹೋರಾಟದ ಗಂಡಸರನ್ನು ಹುಟ್ಟಿಸಿದ ಜಿಲ್ಲೆ. ಪ್ರಜ್ವಲ್, ನಿಖಿಲ್, ಸೂರಜ್ ದೇವೇಗೌಡರ ಸ್ವತ್ತಲ್ಲ, ಅವರು ರಾಜ್ಯದ ಕೊಡುಗೆ. ನಾಡಿನಲ್ಲಿ ಹಿಂದೂ-ಮುಸ್ಲಿಂ ಒಂದೇ ತಾಯಿ ಮಕ್ಕಳಂತೆ ಬಾಳಬೇಕು. ನನಗೇನು ಬೇಕಿಲ್ಲ. ಇದು ನನ್ನ ಆಸೆ’ ಎಂದರು.
‘ದೇಶದ ಪ್ರಜಾಪ್ರಭುತ್ವ ಉಳಿಯಬೇಕು. ಲೀಟರ್ ಪೆಟ್ರೋಲ್ ಬೆಲೆ ₹111 ಆಗಿದೆ. ಕೋಟ್ಯಂತರ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಎಲ್ಲವನ್ನೂ ಮಾರುತ್ತಿದ್ದಾರೆ’ ಎಂದು ಕಿಡಿಕಾರಿದರು.
‘ದೇವೇಗೌಡರು ಪ್ರಧಾನಿಯಾಗಿದ್ದಕ್ಕೆ ಜಿಲ್ಲೆಯ ಜನ ಅಭಿಮಾನ ಪಡಬೇಕು. ಅವರು ರೈತರ ಬದಲು ಬೇರೆ ಕುಟುಂಬದಲ್ಲಿ ಹುಟ್ಟಿದ್ದರೆ ರಾಜ್ಯದಾದ್ಯಂತ ಅವರ ಪ್ರತಿಮೆ ಹಾಕುತ್ತಿದ್ದರು. ಇವರು ಬೆಳೆಸಿದವರು ಇವರನ್ನೇ ಬೈಯ್ಯುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ನಡೆಯನ್ನು ಟೀಕಿಸಿದರು.
‘ಜೆಡಿಎಸ್ ಬಿಜೆಪಿಯ ಬಿ ಟೀಂ ಅಂತಾರೆ. ಹಾಸನದಲ್ಲಿ ಕಾಂಗ್ರೆಸ್ ಮತ ಹಾಕಿದ್ದರಿಂದಲೇ ಬಿಜೆಪಿ ಗೆದ್ದಿದ್ದು ತಾನೆ. ಬಿ ಟೀಂ ಯಾರು’ ಎಂದು ಪ್ರಶ್ನಿಸಿದ ಅವರು, ‘ನಾನು ಚರಿತ್ರೆ ಬರೆದವನು. ನನ್ನ ಬಗ್ಗೆ ಮಾತಾಡಬೇಡಿ’ ಎಂದು
ಎಚ್ಚರಿಸಿದರು.