ಬೆಂಗಳೂರು, ಏ.21: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ತಲೆ ಮರೆಸಿಕೊಂಡಿರುವ ಕಲಬುರಗಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಜತೆ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಕೂತಿರುವ ಚಿತ್ರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ದಿವ್ಯಾ ಹಾಗರಗಿ ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮದ ಕಿಂಗ್‌ಪಿನ್ ಎಂಬುದು ಸಿಐಡಿ ತನಿಖೆಯಲ್ಲಿ ಬಯಲಾಗಿದೆ.
ಇದರ ಬೆನ್ನಲ್ಲೇ ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಬಿ.ಎಸ್. ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಜತೆ ದಿವ್ಯಾ ಹಾಗರಗಿ ಗುರುತಿಸಿಕೊಂಡಿದ್ದ ಪೋಟೋಗಳು ವೈರಲ್ ಆಗಿದ್ದವು. ಇದೀಗ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಹಾಗೂ ದಿವ್ಯಾ ಹಾಗರಗಿ ರೈಲಿನ ಬರ್ತ್‌ನಲ್ಲಿ ಕೂತಿರುವ ಚಿತ್ರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಅದರಲ್ಲೂ ಪೊಲೀಸ್ ಇಲಾಖೆಯ ವಾಟ್ಸ್ ಆಯಪ್ ಗ್ರೂಪ್‌ಗಳಲ್ಲಿ ಈ ಫೋಟೊ ಹರಿದಾಡುತ್ತಿದೆ.
ರೈಲಿನಲ್ಲಿ ಪ್ರಯಾಣ
ವ್ಯಕ್ತಿಯೊಬ್ಬ ಸೆಲ್ಫಿ ತೆಗೆದಿದ್ದು, ದಿವ್ಯಾ ಹಾಗರಗಿ ಪಕ್ಕದಲ್ಲಿ ರವಿ ಡಿ ಚನ್ನಣ್ಣನವರ್ ಕೂತು ಹರಟೆ ಹೊಡೆಯುತ್ತಿದ್ದಾರೆ. ಸಾಮಾನ್ಯ ವ್ಯಕ್ತಿಯಂತೆ ರವಿ ಚನ್ನಣ್ಣನವರ್ ಕೂತಿರುವ ಚಿತ್ರ ಇದೀಗ ಬಹು ಚರ್ಚೆಗೆ ನಾಂದಿ ಹಾಡಿದೆ.
ಅಕ್ರಮ ಗಣಿಗಾರಿಕೆ ಲಂಚ ಪ್ರಕರಣದ ಆರೋಪ ಕೇಳಿ ಬಂದ ಬೆನ್ನಲ್ಲೇ ರವಿ. ಡಿ. ಚನ್ನಣ್ಣನವರ್ ದೊಡ್ಡ ಸುದ್ದಿಯಾಗಿದ್ದರು. ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂದಿತ್ತು. ವಕೀಲ ಜಗದೀಶ್ ಹಾಗೂ ರವಿ ಡಿ. ಚನ್ನಣ್ಣನವರ್ ನಡುವಿನ ಸಮರ ದೊಡ್ಡ ವಿವಾದಕ್ಕೆ ನಾಂದಿ ಹಾಡಿತ್ತು. ಈಗ ಫೇಸ್‌ಬುಕ್, ವಾಟ್ಸ್ ಆಪ್‌ಗಳಲ್ಲಿ ವೈರಲ್ ಆಗಿರುವ ಈ ಫೋಟೋಗಳ ಬಗ್ಗೆ ಜನರು ಬಗೆಯಬಗೆಯ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.