ಕನ್ನಡ ಸಿನಿಮಾಗಳು ಇತ್ತೀಚೆಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮೀರಿ ಪ್ರಪಂಚದಾದ್ಯಂತ ಸದ್ದು ಮಾಡುತ್ತಿರೋದು ಖುಷಿಯ ವಿಚಾರ. ಅದರಲ್ಲೂ ಕನ್ನಡ ಸಿನಿಮಾಗಳು ಬೇರೆ ಭಾಷೆಗೂ ಡಬ್ ಆಗಿ “ನಾವೂ ಯಾರಿಗೂ ಕಮ್ಮಿಯಿಲ್ಲ’ ಎಂದು ತೊಡೆ ತಟ್ಟಿ ನಿಲ್ಲುತ್ತಿರೋದು ಒಳ್ಳೆಯ ಬೆಳವಣಿಗೆ.
ಕಲೆಗೆ ಯಾವುದೇ ಬೇಲಿ ಇಲ್ಲ ಎಂಬುದು ಅಕ್ಷರಶಃ ಸತ್ಯ. ಕನ್ನಡದ ಸಿನಿಮಾಗಳು ಭಾಷೆ, ಗಡಿ ಮೀರಿ ಬಾನೆತ್ತರದಲ್ಲಿ ಹಾರಾಡಲು ಶುರುವಿಟ್ಟುಕೊಂಡಿವೆ. ಹಾಗೆಯೇ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತಾರ ಮಾಡುವಲ್ಲಿ ಸಫಲವಾಗಿದೆ.
ಹಿಂದೆಲ್ಲ ಮೂಲ ಭಾಷೆಯ ಸಿನಿಮಾಗಳು ಬೇರೆ ಭಾಷೆಗಳಿಗೆ ರೀಮೇಕ್ ಆಗುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಒಂದೇ ಭಾಷೆಯಲ್ಲಿ ತಯಾರಾದ ಸಿನಿಮಾ ಬೇರೆ ಬೇರೆ ಭಾಷೆಗೆ ಡಬ್ ಆಗುವ ಮೂಲಕ ಆಯಾ ಭಾಷೆಯ ವೀಕ್ಷಕರನ್ನು ತಲುಪುತ್ತಿವೆ. ಈ ನಿಟ್ಟಿನಲ್ಲಿ ಪರಭಾಷೆಯ ಸಿನಿಮಾಗಳು ಅದಾಗಲೇ ಈ ಹಾದಿಯಲ್ಲಿದ್ದವು.
ಈಗ ಕನ್ನಡದ ಸಿನಿಮಾಗಳೂ ಆ ಸಾಲಿಗೆ ಸೇರುವಲ್ಲಿ ಯಶಸ್ವಿಯಾಗಿವೆ ಎಂಬುದು ಖುಷಿಯ ಸಂಗತಿ. ಕಳೆದ ಮೂರು ವರ್ಷಗಳಿಂದ ಈ ಅಬ್ಬರ ತುಸು ಜೋರಾಗಿಯೇ ಇದೆ. ಪಕ್ಕದ ರಾಜ್ಯ, ರಾಷ್ಟ್ರಗಳಲ್ಲೂ ಕನ್ನಡ ಸಿನಿಮಾಗಳದೇ ಹವಾ. ಫಲಾನುಫಲಗಳು ಏನೇ ಇರಲಿ, ಮೊದಲು ಆಯಾ ಪ್ರೇಕ್ಷಕರನ್ನು ತಲುಪುವ ಕೆಲಸವಾದರೆ ನಂತರ ಆಯಾ ಸಿನಿಮಾಗಳಿಗೆ ತಕ್ಕ ಮಾನ್ಯತೆ ಸಿಕ್ಕೇ ಸಿಗುತ್ತದೆ. ಇದೀಗ ಆ ಹಂತದಲ್ಲಿರುವ ಬಗ್ಗೆ ಸ್ಯಾಂಡಲ್‌ವುಡ್ ಮಂದಿ ಖುಷಿಯಾಗಿದ್ದಾರೆ.