Breaking News

ನಂಬರ್​ಪ್ಲೇಟ್ ನಿರಾಳ; ಹಳೇ ವಾಹನಕ್ಕೂ ಹೈ ಸೆಕ್ಯುರಿಟಿ ಸಂಖ್ಯಾಫಲಕ ಅಳವಡಿಕೆ

Spread the love

ಬೆಂಗಳೂರು :ಹಳೇ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ (ಎಚ್​ಎಸ್​ಆರ್​ಪಿ) ನಂಬರ್ ಅಳವಡಿಸುವಲ್ಲಿ ನಡೆಯುತ್ತಿರುವ ಗೋಲ್ಮಾಲ್​ಗೆ ಕೊನೆಗೂ ಸರ್ಕಾರವೇ ಬ್ರೇಕ್ ಹಾಕಿದೆ. 2019ರ ಏ.1ಕ್ಕಿಂತ ಮೊದಲು ರಸ್ತೆಗಿಳಿದಿರುವ ಹಳೇ ವಾಹನಗಳ ನಂಬರ್ ಪ್ಲೇಟ್​ಗಳನ್ನು ಎಚ್​ಎಸ್​ಆರ್​ಪಿ ಫಲಕಗಳಾಗಿ ಪರಿವರ್ತಿಸಲು ತೀರ್ವನಿಸಿದೆ.

ಜತೆಗೆ ಸರ್ಕಾರವೇ ಗರಿಷ್ಠ ದರ ನಿಗದಿಪಡಿಸಲಿದೆ. ಇದರೊಂದಿಗೆ ಹಳೇ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆ ನಿಯಮ ಕಡ್ಡಾಯವೋ ಅಲ್ಲವೋ ಎಂಬ ಗೊಂದಲಕ್ಕೂ ತೆರೆಬಿದ್ದಂತಾಗಿದೆ. ಹೊಸ ವ್ಯವಸ್ಥೆ ಜಾರಿ ವಿಚಾರದ ಮಾಹಿತಿಯನ್ನು ಸರ್ಕಾರ ಮಂಗಳವಾರ (ಮಾ.29) ಹೈಕೋರ್ಟ್​ಗೂ ನೀಡಿದೆ.

ಸದ್ಯ 2019 ಏ.1ರ ನಂತರ ಖರೀದಿಸಿದ ವಾಹನಗಳಿಗೆ ಮಾತ್ರವೇ ಎಚ್​ಎಸ್​ಆರ್​ಪಿ ನಂಬರ್ ಪ್ಲೇಟ್ ಕಡ್ಡಾಯ ನಿಯಮ ಜಾರಿಯಲ್ಲಿದೆ. ವಾಹನ ಉತ್ಪಾದಕರೇ ನಂಬರ್ ಪ್ಲೇಟ್​ಗಳನ್ನು ಪೂರೈಕೆ ಮಾಡಬೇಕು ಎಂದು ಜವಾಬ್ದಾರಿ ವಹಿಸಲಾಗಿದೆ. ಆದರೆ, ಹಳೇ ವಾಹನಗಳಿಗೆ ಎಚ್​ಎಸ್​ಆರ್​ಪಿ ಕಡ್ಡಾಯವಲ್ಲದಿದ್ದರೂ ಕೆಲವರು ಇದನ್ನೇ ದುರ್ಬಳಕೆ ಮಾಡಿಕೊಂಡು ನಕಲಿ ನಂಬರ್ ಪ್ಲೇಟ್ ಹಾಗೂ ಹಾಲೋಗ್ರಾಂ ಸ್ಟಿಕ್ಕರ್​ಗಳನ್ನು ಅಳವಡಿಸಿ, ಸಾರ್ವಜನಿಕರಿಂದ ಹಣ ಸುಲಿಗೆ ಮಾಡುವ ದಂಧೆ ಹುಟ್ಟಿಕೊಂಡಿತ್ತು.

ಹಳೇ ವಾಹನಗಳ ಮಾಲೀಕರಿಗೆ ಹೊರೆಯಾಗದಂತೆ ಎಚ್​ಎಸ್​ಆರ್​ಪಿ ನಂಬರ್ ಪ್ಲೇಟ್ ಅಳವಡಿಕೆ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿದ್ದು, ಸರ್ಕಾರವೇ ಗರಿಷ್ಠ ದರ ನಿಗದಿಪಡಿಸಲಿದೆ. ಅಲ್ಲದೆ, ರಾಜ್ಯಾದ್ಯಂತ ನಂಬರ್ ಪ್ಲೇಟ್​ಗಳನ್ನು ಪೂರೈಸುವ ಜವಾಬ್ದಾರಿಯನ್ನು 5 ರಿಂದ 7 ಸಂಸ್ಥೆಗಳನ್ನು ಒಟ್ಟುಗೂಡಿಸಿ ಜವಾಬ್ದಾರಿ ನೀಡಲು ನಿರ್ಧರಿಸಿದೆ. ಹೊಸ ವ್ಯವಸ್ಥೆಯಿಂದ ನಂಬರ್ ಪ್ಲೇಟ್ ದಂಧೆ ನಿಯಂತ್ರಣಕ್ಕೆ ಬರಲಿದೆ.

ನಿಯಮ ಉಲ್ಲಂಘನೆ: ಹೊಸ ವಾಹನ ಖರೀದಿಯಾದ 6 ಗಂಟೆಯೊಳಗೆ ಎಚ್​ಎಸ್​ಆರ್​ಪಿ ಪ್ಲೇಟ್ ಅಳವಡಿಸಬೇಕೆಂಬ ನಿಯಮವಿದೆ.

1000 ಕೋಟಿ ರೂ.ವ್ಯವಹಾರ: ರಾಜ್ಯದಲ್ಲಿ ಒಂದೂವರೆ ಕೋಟಿ ಹಳೇ ವಾಹನಗಳಿರಬಹುದೆಂಬ ಅಂದಾಜಿದೆ. ಎಲ್ಲ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಸಿದರೆ ಅಂದಾಜು 600 ರಿಂದ 1000 ಕೋಟಿ ರೂ. ವಹಿವಾಟು ನಡೆಯಲಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಂಬರ್ ಪ್ಲೇಟ್​ನಲ್ಲಿ ಏನೇನಿರುತ್ತೆ?

  • ಪ್ರತಿ ವಾಹನದ ಎಚ್​ಎಸ್​ಆರ್​ಪಿ ಪ್ಲೇಟ್​ಗೂ ಪ್ರತ್ಯೇಕ ವಿಶಿಷ್ಟ ಗುರುತಿನ ಸಂಖ್ಯೆ
  • ಇಂಜಿನ್ ಸಂಖ್ಯೆ, ಚಾಸ್ಸಿ ಸಂಖ್ಯೆ, ರಿಜಿಸ್ಟ್ರೇಷನ್ ಸಂಖ್ಯೆ, ವಿಮೆ, ಮಾಲೀಕರ ಮಾಹಿತಿ ಅಡಕ
  • 10 ಪಿನ್ ನಂಬರ್ ಒಳಗೊಂಡಿರುವ ವಿಶಿಷ್ಟ ಗುರುತಿನ ಸ್ಟಿಕ್ಕರ್ ಎಡಭಾಗದಲ್ಲಿ ಅಂಟಿಸಲಾಗುತ್ತೆ
  • ಅಶೋಕ ಚಕ್ರ ಚಿಹ್ನೆಯ ಕ್ರೋಮಿಯಂ ಸ್ಟಿಕ್ಕರ್ ಅಳವಡಿಕೆ
  • ಪೊಲೀಸರು ಸ್ಕಾಯನ್ ಮಾಡಿದ ತಕ್ಷಣ ಎಲ್ಲ ಮಾಹಿತಿಗಳು ಲಭ್ಯ

2021ರ ಟೆಂಡರ್ ರದ್ದು

ಹಳೇ ವಾಹನಗಳಿಗೆ ಎಚ್​ಎಸ್​ಆರ್​ಪಿ ಪ್ಲೇಟ್ ಅಳವಡಿಸಲು 2021ರ ಅಕ್ಟೋಬರ್​ನಲ್ಲಿ ಸಾರಿಗೆ ಇಲಾಖೆ ಇ- ಟೆಂಡರ್ ಕರೆದಿತ್ತು. ಕೆಲ ಷರತ್ತು ವಿಧಿಸಿದ್ದನ್ನು ಪ್ರಶ್ನಿಸಿ, ನಂಬರ್ ಪ್ಲೇಟ್ ಮಾರಾಟಗಾರ ಕಂಪನಿಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಆದರೀಗ ಇ-ಟೆಂಡರ್ ರದ್ದುಪಡಿಸಲಾಗಿದೆ.

ಅನುಕೂಲವೇನು?

  • ಸರ್ಕಾರವೇ ಗರಿಷ್ಠ ದರ ನಿಗದಿಪಡಿಸುವುದರಿಂದ ಸಣ್ಣಪುಟ್ಟ ಅಂಗಡಿಗಳಲ್ಲಿ ನಡೆಯುವ ನಂಬರ್ ಪ್ಲೇಟ್ ಶುಲ್ಕ ವಸೂಲಿ ದಂಧೆ ನಿಯಂತ್ರಣ
  • ಹಳೇ ವಾಹನಗಳಿಗೆ ಎಚ್​ಎಸ್​ಆರ್​ಪಿ ಪ್ಲೇಟ್ ಕಡ್ಡಾಯವಲ್ಲದಿದ್ದರೂ ಟ್ರಾಫಿಕ್ ಪೊಲೀಸರು ದಂಡ ಹಾಕುತ್ತಿದ್ದರು. ಈಗ ಪ್ಲೇಟ್ ಕಡ್ಡಾಯವಾಗಿ ಅಳವಡಿಸುವುದರಿಂದ ಪೊಲೀಸರ ಕಿರಿಕಿರಿ ತಪ್ಪುತ್ತದೆ
  • ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡು ಅಪರಾಧ ಕೃತ್ಯಗಳಿಗೆ ವಾಹನಗಳ ಬಳಕೆ ಪ್ರಮಾಣ ಕಡಿಮೆಯಾಗುತ್ತದೆ
  • ಎಚ್​ಎಸ್​ಆರ್​ಪಿ ಪ್ಲೇಟ್​ನಲ್ಲೇ ವಾಹನ ವಿವರ, ಮಾಲೀಕನ ಹೆಸರು, ವಿಳಾಸ ಅಡಕವಾಗಿರುವುದರಿಂದ ಪೊಲೀಸ್ ತನಿಖೆಗೆ ಉಪಯುಕ್ತವಾಗಲಿದೆ

ಸಿಎಂ ಸಭೆ ನಿರ್ಧಾರ

  • ಸರ್ಕಾರ ನಂಬರ್ ಪ್ಲೇಟ್ ಖರೀದಿಸಲ್ಲ. ಬದಲಾಗಿ ಫಲಕಗಳನ್ನು ಸಾರ್ವಜನಿಕರು ನೇರವಾಗಿ ಖರೀದಿಸಲು ಸರಬರಾಜು ಸಂಸ್ಥೆಗಳನ್ನು ನೇಮಿಸಬೇಕು
  • ರಾಜ್ಯಾದ್ಯಂತ ನಂಬರ್ ಪ್ಲೇಟ್ ಪೂರೈಸಲು ಒಂದೇ ಸಂಸ್ಥೆ ನೇಮಿಸಿದರೆ ಸೇವೆ ಒದಗಿಸಲು ಸಾಧ್ಯವಾಗಲ್ಲ. ಜತೆಗೆ ಸ್ಪರ್ಧಾತ್ಮಕ ದರ ಕೊಡಲು ಆಗಲ್ಲ.
  • ಟೆಂಡರ್ ಕರೆಯುವ ಬದಲು ನಿರ್ದಿಷ್ಟವಾದ 5 ರಿಂದ 7 ಸಂಸ್ಥೆಗಳನ್ನು ಗುರುತಿಸಿ, ಸರ್ಕಾರವೇ ಗರಿಷ್ಠ ದರ ನಿಗದಿಪಡಿಸುವುದು

ಆದರೆ, ಪ್ಲೇಟ್ ಪೂರೈಕೆದಾರರ ವಿಳಂಬ ಹಾಗೂ ಶೋರೂಂ ಡೀಲರ್​ಗಳ ಉದಾಸೀನ ಧೋರಣೆಯಿಂದಾಗಿ ಹಲವು ತಿಂಗಳು ಕಳೆದರೂ ನಂಬರ್ ಅಳವಡಿಕೆ ಮಾಡುತ್ತಿಲ್ಲ. ಹೀಗಾಗಿ ಪೊಲೀಸರಿಂದ ವಾಹನ ತಪಾಸಣೆ ವೇಳೆ ಮಾಲೀಕರಿಗೆ ತೊಂದರೆಯಾಗುತ್ತಿದೆ.

ಪ್ರಕ್ರಿಯೆ:

  • ಗರಿಷ್ಠ ದರ ನಿಗದಿಪಡಿಸಿ, 5-7 ಸಂಸ್ಥೆಗಳನ್ನು ಪಟ್ಟಿಗೆ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಜ.25ರಂದು ನಡೆದ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ಕೊಟ್ಟಿದ್ದಾರೆ.

Spread the love

About Laxminews 24x7

Check Also

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಆಹ್ವಾನ ವಿರೋಧಿಸಿ ಮತ್ತೆರಡು ಪಿಐಎಲ್ ಸಲ್ಲಿಕೆ

Spread the loveನಾಡಹಬ್ಬ ಐತಿಹಾಸಿಕ ಮೈಸೂರು ದಸರಾ ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್‌ರನ್ನು ಮುಖ್ಯ ಅತಿಥಿಯಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ