ಮಹಾಲಿಂಗಪುರ: ಪದವಿ ಪರೀಕ್ಷೆಗಳು ಮಾ.22ರಿಂದ ಪ್ರಾರಂಭವಾಗಿವೆ. ಬುಧವಾರ ನಡೆಯಬೇಕಿದ್ದ ಪದವಿ ಮೂರನೇ ಸೆಮಿಸ್ಟರ್‌ನ ಪತ್ರಿಕೋದ್ಯಮ ವಿಭಾಗದ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮಗಳು ವಿಷಯದ ಪಶ್ನೆ ಪತ್ರಿಕೆ ಬಾರದೇ ಪರೀಕ್ಷೆ ರದ್ದಾಗಿದೆ. ಇದರಿಂದ ಕೋಪಗೊಂಡ ವಿದ್ಯಾರ್ಥಿಗಳು ಬೆಳಗಾವಿ ರಾಣಿ ಚನ್ನಮ್ಮ ವಿವಿ ವಿರುದ್ಧ ಪ್ರತಿಭಟನೆ ನಡೆಸಿದರು.
ಬುಧವಾರ ಪದವಿ ಇತರ ವಿಷಯದ ಪರೀಕ್ಷೆ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯುತ್ತಿರುವ ಕಾರಣ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಕಾಲೇಜಿನ ಆವರಣದ ಹೊರಗೆ ಪ್ರತಿಭಟನೆ ನಡೆಸಿದರು.
2ನೇ ಬಾರಿ ಪರೀಕ್ಷೆ ರದ್ದು: ಮಾ.28ರಂದು ನಡೆಯಬೇಕಿದ್ದ ಪತ್ರಿಕೋದ್ಯಮ ವಿಭಾಗದ ಬರವಣಿಗೆಯ ಕೌಶಲ್ಯಗಳು ವಿಷಯದ ಪ್ರಶ್ನೆ ಪತ್ರಿಕೆ ಬಾರದೇ ಒಂದು ಗಂಟೆ ಕಾಲ ಕಾಯ್ದು ಪರೀಕ್ಷೆ ರದ್ದಾಗಿ ವಿದ್ಯಾರ್ಥಿಗಳು ಮನೆಗೆ ಮರಳಿದ್ದರು. ಇಂದು ನಡೆಯಬೇಕಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮಗಳು ವಿಷಯದ ಪ್ರಶ್ನೆ ಪತ್ರಿಕೆಯೂ ಬಂದಿಲ್ಲ.
ಪತ್ರಿಕೋದ್ಯಮ ವಿಭಾಗದ ಎರಡನೇ ಪ್ರಶ್ನೆ ಪತ್ರಿಕೆ ಬಾರದಿರುವ ಕಾರಣ ರೊಚ್ಚಿಗೆದ್ದ ವಿದ್ಯಾರ್ಥಿಗಳು ಬೆಳಗಾವಿ ಚನ್ನಮ್ಮ ವಿವಿ ವಿರುದ್ಧ ಪ್ರತಿಭಟನೆ ನಡೆಸಿದರು.