ಬೆಂಗಳೂರು: ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ತರಲು ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆ ಮುಂದಾಗಿದ್ದು, ಇನ್ನು ಮುಂದೆ ಒಂದು ಅಂಕದ ವ್ಯತ್ಯಾಸ ಇದ್ದರೂ ಅಂಕ ಪಟ್ಟಿ ಬದಲಿಸಲು ನಿರ್ಧರಿಸಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದಲೇ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಹಾಲಿ ನಿಯಮದ ಪ್ರಕಾರ ಮರು ಮೌಲ್ಯಮಾಪನದ ವೇಳೆ ಆರು ಅಂಕಗಳಿಗಿಂತ ಹೆಚ್ಚು ಅಂಕಗಳ ವ್ಯತ್ಯಾಸ ಇದ್ದರೆ ಮಾತ್ರ ವಿದ್ಯಾರ್ಥಿಯ ಅಂಕ ಪಟ್ಟಿಯನ್ನು ಬದಲಿಸಿ ನೀಡಲಾಗುತ್ತಿದೆ. ಆರು ಅಂಕಗಳಿಗಿಂತ ಕಡಿಮೆ ಅಂಕಗಳ ವ್ಯತ್ಯಾಸ ಇದ್ದರೆ ಫಲಿತಾಂಶದಲ್ಲಿ ಯಾವುದೇ ಪರಿಣಾಮ ಉಂಟಾಗುತ್ತಿಲ್ಲ. ಇನ್ನು ಮುಂದೆ, ವಿದ್ಯಾರ್ಥಿ ಗಳಿಸಿದ ಒಂದೊಂದು ಅಂಕವನ್ನೂ ಪರಿಗಣಿಸಲು ತೀರ್ಮಾನಿಸಲಾಗಿದೆ. ಮರು ಮೌಲ್ಯಮಾಪನದಲ್ಲಿ ಒಂದು ಅಂಕದ ವ್ಯತ್ಯಾಸ ಬಂದರೂ ಅಂಕಪಟ್ಟಿ ಬದಲಿಸಲು ನಿರ್ಧರಿಸಲಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
‘ಮರು ಮೌಲ್ಯಮಾಪನದ ವೇಳೆ ಒಂದು ಅಂಕದ ವ್ಯತ್ಯಾಸ ಬಂದರೂ ಪರಿಗಣಿಸುವಂತೆ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಮನವಿಗಳ ಮಹಾಪೂರವೇ ಬರುತ್ತಿದೆ. ಹೀಗಾಗಿ, ಮರು ಮೌಲ್ಯಮಾಪನ ಪದ್ಧತಿಯಲ್ಲಿ ಬದಲಾವಣೆ ತರಲು ಚಿಂತನೆ ನಡೆದಿದೆ’ ಎಂದು ಎರಡು ದಿನಗಳ ಹಿಂದೆ ವಿಧಾನಪರಿಷತ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದರು.
‘ಒಂದು ಅಂಕದ ವ್ಯತ್ಯಾಸ ಇದ್ದರೂ ಪರಿಗಣಿಸುವ ಕುರಿತ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರದ ಅನುಮೋದನೆ ಸಿಕ್ಕಿದ ಬಳಿಕ ಹೊಸ ನಿಯಮ ಜಾರಿಗೆ ಬರಲಿದೆ. ಹಾಲಿ ಮೌಲ್ಯಮಾಪನ ನಿಯಮ 1997ರಿಂದ ಜಾರಿಯಲ್ಲಿದೆ. ನಿಯಮ ತಿದ್ದುಪಡಿಗೆ ಹಲವು ಬಾರಿ ಪ್ರಸ್ತಾವನೆಗಳನ್ನು ಸಲ್ಲಿಸಿದ್ದರೂ ನಂತರ ವರ್ಷಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ’ ಎಂದೂ ಅಧಿಕಾರಿ ಮಾಹಿತಿ ನೀಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವಬಿ.ಸಿ. ನಾಗೇಶ್, ‘ಹಾಲಿ ಜಾರಿಯಲ್ಲಿರುವ ಮರು ಮೌಲ್ಯಮಾಪನ ನಿಯಮವನ್ನು ಪರಿಷ್ಕರಿಸಲು ಉದ್ದೇಶಿಸಲಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಶೇ 0.5ರಷ್ಟು ಅಂಕಗಳ ವ್ಯತ್ಯಾಸ ಇದ್ದರೂ ಫಲಿತಾಂಶದ ಮೇಲೆ ದೊಡ್ಡ ಪರಿಣಾಮವನ್ನೇ ಉಂಟು ಮಾಡುತ್ತದೆ’
Laxmi News 24×7